ಯಲ್ಲಾಪುರ: ಹಿತ್ಲಳ್ಳಿ- ಮಂಚಿಕೇರಿ – ಹರಿಗದ್ದೆ – ಹಿತ್ಲಳ್ಳಿ ಮೂಲಕ ಶಿರಸಿ ಯಲ್ಲಾಪುರ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ದುರಸ್ತಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ. ಎಂ. ಭಟ್ಟ ಹಿತ್ಲಳ್ಳಿಯ ಮಾರಿಮನೆಯ ಬಳಿ ಊರ ನಾಗರಿಕರೊಂದಿಗೆ ಸಮಾಲೋಚನಾ ಸಭೆ ನಡೆಸಿದರು.
ಸಭೆಯಲ್ಲಿ ಊರ ನಾಗರಿಕರಿಗೆ ಇಲಾಖೆಯಿಂದ ಗುತ್ತಿಗೆದಾರರಿಗೆ ಹಣ ಮಂಜೂರು ಆಗದೆ ಇರುವ ಮತ್ತು ಇತರೆ ತಾಂತ್ರಿಕ ಕಾರಣಗಳಿಂದ ರಸ್ತೆ ಕಾಮಗಾರಿ ನಿಂತಿದ್ದು, ಈಗಾಗಲೇ ಈ ಬಗ್ಗೆ ಧಾರವಾಡದ ಲೋಕೋಪಯೋಗಿ ಇಲಾಖೆಯ ಉತ್ತರ ವಿಭಾಗದ ಮುಖ್ಯ ಇಂಜಿನಿಯರ್ ಅವರಿಗೆ ವಿಷಯ ತಿಳಿಸಿ, ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ತಮಗೆ ತೆಗೆದುಕೊಳ್ಳುವ ಭರವಸೆ ನೀಡಿದರು. ಗ್ರಾಮಸ್ಥರು ನಮಗೆ ರಸ್ತೆ ಕೂಡಲೇ ಆಗಬೇಕು ಈ ಬಗ್ಗೆ ನಮಗೆ ಲಿಖಿತ ಧನಾತ್ಮಕ ಪ್ರತಿಕ್ರಿಯೆಯೇ ದೊರೆಯಬೇಕು ಎಂದು ಪಟ್ಟು ಹಿಡಿದರು.
ಅಲ್ಲದೇ ಈ ಮೊದಲೇ ಜಿಲ್ಲಾಧಿಕಾರಿಯವರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದಂತೆ ರಸ್ತೆ ಕಾಮಗಾರಿ ಪ್ರಾರಂಭವಾಗುವ ಸೂಚನೆ ದೊರೆಯದೆ ಇದ್ದಲ್ಲಿ ಎಲ್ಲರೂ ಒಗ್ಗಟ್ಟಾಗಿ ಖಡಾಖಂಡಿತವಾಗಿ ಶಿರಸಿ – ಯಲ್ಲಾಪುರ ರಾಜ್ಯ ಹೆದ್ದಾರಿಯನ್ನು ತಡೆಗಟ್ಟುವ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ಸಾರ್ವಜನಿಕರು ಒಕ್ಕರೊಲಿನಿಂದ ಹೇಳಿದರು.ನಮ್ಮ ಹಂತದಲ್ಲಿ ಸಾಧ್ಯವಿರುವ ಪ್ರಯತ್ನ ಮಾಡಿ ರಸ್ತೆ ಪ್ರಾರಂಭಿಸುವುದಾಗಿ ಇಂಜಿನಿಯರ್ ಸಾರ್ವಜನಿಕರಿಗೆ ಮನವರಿಕೆ ಮಾಡಿದರು. ಹಿತ್ಲಳ್ಳಿಯ ಗ್ರಾ.ಪಂ ಸದಸ್ಯ ಪ್ರಸನ್ನ ಭಟ್ಟ, ಭಾರತೀಯ ಕಿಸಾನ್ ಸಂಘದ ಪ್ರಮುಖ ನಾಗೇಂದ್ರ ಪತ್ರೇಕರ್, ಗುತ್ತಿಗೆದಾರ ಸಂಘದ ತಾಲೂಕಾ ಅಧ್ಯಕ್ಷ ವಿ.ಎಂ.ಹೆಗಡೆ ಜಾಲಿಮನೆ,ಗ್ರಾಮಸ್ಥರು ಉಪಸ್ಥಿತರಿದ್ದರು.