ಕಾರವಾರ: ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು ನಿರಪರಾಧಿಗಳು ಎಂದು ಉಪಮುಖ್ಯಮಂತ್ರಿ ಹೇಳುತ್ತಾರೆ. ರಾಮನ ಸೇವೆಗೆ ಹೊರಟವರು ಅಪರಾಧಿ ಹೇಗೆ ಅಗುತ್ತಾರೆ? ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಕೇಳಿದರು.
ಅವರು ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲಿಸ್ ಠಾಣೆಗೆ ಬೆಂಕಿ ಹಾಕಿದವರ ರಕ್ಷಣೆ ಮಾಡುತ್ತಾರೆ ಎಂದರೆ ಏನು ಅರ್ಥ? 31 ವರ್ಷಗಳ ಹಿಂದಿನ ಪ್ರಕರಣದಡಿ ಕರಸೇವಕ ಶ್ರೀಕಾಂತ ಪೂಜಾರಿ ಬಂಧನ ಮಾಡಿದ್ದಾರೆ. ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಉಚಿತ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಲಿ ವಿಫಲವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಲಕ್ಷಾಂತರ ಮಹಿಳೆಯರಿಗೆ ಮೊದಲ ಕಂತೇ ಬಂದಿಲ್ಲ. ಉಚಿತ ಬಸ್ ನೀಡಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಆಗಿದೆ. ಉಚಿತ ವಿದ್ಯುತ್ ನೀಡುತ್ತೇವೆ. ಎಲ್ಲರಿಗೂ ಫ್ರೀ ಎಂದು ಹೇಳಿದ್ದರು. ಗೆದ್ದ ಬಳಿಕ 200 ಯುನಿಟ್ ಎಂದರೂ ಅದನ್ನೂ ನೀಡಿಲ್ಲ. ಯುವ ನಿಧಿಗೆ ನಿರೋದ್ಯೋಗಿಗಳು ಅರ್ಹರು ಎಂದಿದ್ದರು. ಈಗ ಕಾಂಗ್ರೆಸ್ಸಿಗರ ಮಾತು ಬದಲಾಗಿದೆ. ಯಾವ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ. ಉಚಿತ ಹೆಸರಿನಲ್ಲಿ ಮತ ಪಡೆದು ಅಧಿಕಾರಕ್ಕೆ ಬಂದು ಈಗ ವಂಚನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಕಾರಣ:
ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಭಯೋತ್ಪಾದನೆಯ ಆತಂಕದ ವಾತಾವರಣವನ್ನು ಕಾಂಗ್ರೆಸಿಗರು ನಿರ್ಮಿಸಿದ್ದಾರೆ. ರಾಮಮಂದಿರ ಉದ್ಘಾಟನೆ ವೇಳೆ ಏನಾದರೂ ಅವಘಡವಾದಲ್ಲಿ ಕಾಂಗ್ರೆಸ್ ಕಾರಣವಾಗುತ್ತದೆ. ಹಿರಿಯ ರಾಜಕಾರಣಿ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಹರಿಪ್ರಾಸಾದ ಹೇಳಿಕೆ ಗಮನಸಿದರೆ ಏನೋ ಸಂಚು ರೂಪಿಸಿದಂತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗುತ್ತಿರುವುದಕ್ಕೆ ಯಾರೇ ಆದರೂ ಭಯದ ವಾತಾವರಣ ಸೃಷ್ಟಿಸಿದರೂ ಅದು ಸರಿಯಲ್ಲ. ಬಿ.ಕೆ.ಹರಿಪ್ರಸಾದ್ ಅವರೇ ನಿಮ್ಮ ಬಳಿಯಿರುವ ಮಾಹಿತಿ ಪೊಲೀಸರಿಗೆ ನೀಡಿ, ಅಂತಹವರ ವಿರುದ್ಧ ಕ್ರಮವಾಗಲಿ. 31 ವರ್ಷದ ಹಳೆಯ ಪ್ರಕರಣದಲ್ಲೇ ಬಂಧನ ಮಾಡಿದ್ದಾರೆ. ರಾಮಮಂದಿರಕ್ಕೆ ಆತಂಕ ಸೃಷ್ಟಿಸುವವರನ್ನು ಬಂಧಿಸಲಾಗುವುದಿಲ್ಲವೇ? ಎಂದು ಸರಕಾರವನ್ನು ಪ್ರಶ್ನಿಸಿದರು.
ಕೇಂದ್ರ ಸರಕಾರದ ವಿಕಸಿತ ಭಾರತ ಕಾರ್ಯಕ್ರಮ ಉತ್ತರ ಕನ್ನಡದ ಗ್ರಾಮ ಪಂಚಾಯತದಲ್ಲಿ ನಡೆಯುತ್ತಿದೆ. ಈಗಾಗಲೇ 163 ಗ್ರಾಮ ಪಂಚಾಯದದಲ್ಲಿ ಕಾರ್ಯಚಟುವಟಿಕೆ ಪೂರ್ಣವಾಗಿದೆ. ಕೇಂದ್ರದ ಯೋಜನೆ ತಲುಪದೇ ಇದ್ದರೆ ಜನರಿಗೆ ತಲುಪಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಅರ್ಜಿ ನೀಡಿದರೆ ಮನೆ ಬಾಗಿಲಿಗೇ ಯೋಜನೆಯನ್ನು ತಲುಪಿಸುತ್ತೇವೆ ಎಂದು ತಿಳಿಸಿದರು. ಸಂಸದ ಅನಂತಕುಮಾರ ಹೆಗಡೆ ಬುಧವಾರ ಕಾರವಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗದೇ ಇರುವ ಬಗ್ಗೆ ಕೇಳಿದಾಗ, ನಿಮಗೆ ಅವರಿಗೆ ಆತ್ಮೀಯತೆಯಿದೆ. ನನ್ನ ಬಳಿ ಕೇಳಿದರೆ ಹೇಗೆ? ಎಂದ ಅವರು ಭೂತ್, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಒಳಗೊಂಡು ಎಲ್ಲೆಡೆ ಪಕ್ಷ ಸಂಘಟನೆ ನಡೆಯುತ್ತಿದೆ. ಈ ಬಾರಿ ರಾಜ್ಯದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ. ರಾಜಕೀಯದಲ್ಲಿ ಆಸೆಆಕಾಂಕ್ಷೆ ಸಾಕಷ್ಟು ಇರುತ್ತದೆ. ಆದರೆ ಅವಕಾಶ ಸೀಮಿತವಾಗಿರುತ್ತದೆ. ಹಿರಿಯರು ಅಂತಿಮ ಮಾಡಿದ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ಎನ್.ಎಸ್. ಹೆಗಡೆ, ನ್ಯಾಯವಾದಿ ನಾಗರಾಜ ನಾಯಕ, ನಾಗೇಶ ಕುರುಡೇಕರ, ಸುಭಾಷ್ ಗುನಗಿ ಪತ್ರಿಕಾಗೋಷ್ಟಿಯಲ್ಲಿದ್ದರು.