ಜೋಯಿಡಾ : ತಾಲೂಕಿನ ಕಾಳಿ ಪ್ರವಾಸೋದ್ಯಮ ಸಂಸ್ಥೆ, ಗೆಡ್ಡೆ ಗೆಣಸು ಉತ್ಪಾದಕರ ಸಂಘ, ಕಾಳಿ ರೈತ ಉತ್ಪಾದಕರ ಸಂಘ ಮತ್ತು ಜೋಯಿಡಾ ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಡಿ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಕುಣಬಿ ಸಭಾಭವನದ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗೆಡ್ಡೆ ಗೆಣಸು ಮೇಳವು ಎಲ್ಲರ ಗಮನ ಸೆಳೆಯಿತು.
ಗೆಡ್ಡೆ ಗೆಣಸು ಮೇಳಕ್ಕೆ ಗೋವಾ ರಾಜ್ಯದ ವಿಧಾನಸಭೆಯ ಸಭಾಪತಿಗಳಾದ ರಮೇಶ್ ತವಡ್ಕರ್ ಚಾಲನೆಯನ್ನು ನೀಡಿ ಮಾತನಾಡುತ್ತಾ, ಸಾಂಪ್ರದಾಯಕವಾಗಿ ಬೆಳೆದು ಬಂದ ಕೃಷಿ ಚಟುವಟಿಕೆ ಹಾಗೂ ಆಹಾರ ಪದ್ಧತಿಯನ್ನು ಉಳಿಸಿ ಬೆಳೆಸುವ ಮೂಲಕ ಜೋಯಿಡಾ ತಾಲೂಕು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಗೆಡ್ಡೆ ಗೆಣಸು ಮೇಳ ಇಲ್ಲಿಯ ಆಹಾರ ವಸ್ತುಗಳಿಗೆ ವಿಶೇಷವಾದ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಪ್ರೇರಣಾದಾಯಿಯಾಗಲೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಯಲ್ಲಾಪುರ ಶಾಸಕರಾದ ಶಿವರಾಮ ಹೆಬ್ಬಾರ್ ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯನ್ನು ಆರಾಧಿಸುತ್ತಾ ಬಂದಿರುವ ಜೋಯಿಡಾ ತಾಲೂಕಿನ ಜನತೆಯ ಸಂಸ್ಕಾರಯುತವಾದ ಜೀವನ ಪದ್ಧತಿ ಅನುಕರಣೀಯ. ಗೆಡ್ಡೆ ಗೆಣಸು ಮೇಳ ಇಲ್ಲಿಯ ಸಂಸ್ಕೃತಿ ಸಂಸ್ಕಾರ ಹಾಗೂ ಸಾಂಪ್ರದಾಯಿಕ ಕೃಷಿ ಚಟುವಟಿಕೆಯ ಅನಾವರಣದ ಜೊತೆಗೆ ಉತ್ತಮ ಮಾರುಕಟ್ಟೆಗೆ ಸ್ಪೂರ್ತಿಯಾಗಲಿ ಎಂದರು.
ಅಧ್ಯಕ್ಷತೆಯನ್ನು ಕಾಳಿ ರೈತ ಉತ್ಪಾದಕರ ಸಂಘದ ಅಧ್ಯಕ್ಷರಾದ ಶಿಬಿಂದು ಕಾಮತ್ ವಹಿಸಿ, ಗೆಡ್ಡೆ ಗೆಣಸು ಮೇಳದ ಉದ್ದೇಶ ಮತ್ತು ಪರಿಕಲ್ಪನೆಯ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಪ್ರಮುಖರಾದ ನರಸಿಂಹ ಛಾಪಖಂಡ, ಕುಣಬಿ ಸಮಾಜದ ತಾಲೂಕು ಅಧ್ಯಕ್ಷರಾದ ಅಜಿತ್ ಮಿರಾಶಿ, ಗೆಡ್ಡೆ ಗೆಣಸು ಮೇಳದ ಸಂಘಟಕರಾದ ಜಯನಂದ ಡೇರೆಕರ, ವಿಷ್ಣು ಡೇರೆಕರ ಮೊದಲಾದವರು ಉಪಸ್ಥಿತರಿದ್ದರು.ಜಯನಂದ ಡೇರೆಕರ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೇಮಾನಂದ ವೇಳಿಪ್ ವಂದಿಸಿದರು. ಸುದರ್ಶನ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
150ಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರು ತಾವು ಬೆಳೆದ ವಿವಿಧ ಜಾತಿಯ ಗೆಡ್ಡೆ ಗೆಣಸುಗಳನ್ನು ಹಾಗೂ ಗ್ರಾಮೀಣ ಭಾಗದ ಆಹಾರ ವಸ್ತುಗಳನ್ನು ಪ್ರದರ್ಶನದ ಜೊತೆಗೆ ಮಾರಾಟ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಗ್ರಾಮೀಣ ಸೊಗಡಿನ ಹಾಗೂ ಬುಡಕಟ್ಟು ಸಂಸ್ಕೃತಿಯ ರುಚಿ ರುಚಿಯಾದ ತಿಂಡಿ ತಿನಿಸುಗಳು ಎಲ್ಲರ ಆಕರ್ಷಣೆಗೆ ಪಾತ್ರವಾಯಿತು. ಬೃಹತ್ ಗಾತ್ರದ ಗೆಡ್ಡೆ ಗೆಣಸುಗಳು ಮೇಳಕ್ಕೆ ಮೆರುಗು ತಂದವು.
ಮೇಳದಲ್ಲಿ ತಾಲೂಕು ಮಾತ್ರವಲ್ಲದೇ ಹೊರ ತಾಲೂಕು, ಹೊರ ಜಿಲ್ಲೆಯಿಂದಲೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.