Slide
Slide
Slide
previous arrow
next arrow

ಐಟಿ ಪಾರ್ಕ್‌ನತ್ತ ಸಹಕಾರಿ‌ ಸಂಸ್ಥೆಗಳು ಚಿತ್ತ ಹರಿಸಲಿ

300x250 AD

ಈ ಶತಮಾನದ ಅವಶ್ಯಕತೆಗೆ ಇಂದೇ ನಾಂದಿಯಾಗಬೇಕು | ಸಹಕಾರಿ ಸಂಘಗಳು ಸಂಘಟಿತವಾಗಿ ಬದ್ಧತೆ ತೋರಲಿ

e – ಉತ್ತರ ಕನ್ನಡ ವರದಿ

ಅದೊಂದು ಕಾಲವಿತ್ತು. ರೈತರು ಬೆಳೆದ ಬೆಳೆಯನ್ನು ಬೆನ್ನಮೇಲೆ ಹೊತ್ತು, ಕಿಲೋಮೀಟರ್ ದೂರ ಸಾಗಿ, ಎತ್ತಿನ ಬಂಡಿಗಳ ಮೇಲೆ ಹಾಕಿಕೊಂಡು ಶಿರಸಿ ಪಟ್ಟಣಕ್ಕೆ ತರಬೇಕಿತ್ತು. ಕೆಲವೇ ಕೆಲವಿದ್ದ ವ್ಯಾಪಾರಸ್ತರು ಮನಸ್ಸು ಮಾಡಿದರೆ ಮಾತ್ರ ಅಡಿಕೆ ವ್ಯಾಪಾರ. ಇಲ್ಲವಾದಲ್ಲಿ ಪುನಃ ವಾಪಾಸ್ ಹೊತ್ತು ಮನೆಗೆ ಒಯ್ಯಬೇಕಿತ್ತು. ಮನೆಯಲ್ಲಿ ಬಹುದಿನ ಬೆಳೆಯನ್ನು ಸಂಗ್ರಹಿಸಲು ಸಹ ಕಳ್ಳರ ಭಯ. ಒಟ್ಟಿನಲ್ಲಿ ವರುಷದ ಬೆಳೆಯನ್ನು ಮಾರಿ ಹಣವನ್ನು ತೆಗೆದುಕೊಳ್ಳುವವರೆಗೆ ರೈತ ಸುಸ್ತಾಗಿ ಹೋಗುತ್ತಿದ್ದ. ಜೊತೆಗೆ ಬೆಳೆಗೆ ಬೆಲೆಯೂ ಕೂಡ ಅಷ್ಟಕ್ಕಷ್ಟೇ. ಹೀಗಿರುವಾಗ ಆ ಕಾಲಕ್ಕೆ ಅತ್ಯಾವಶ್ಯಕ ಎನಿಸಿದ್ದ ಸಹಕಾರಿ ವ್ಯವಸ್ಥೆಗೆ ಟೊಂಕ ಕಟ್ಟಿ ನಿಂತು, ಮನೆ ಮನೆ ತಿರುಗಿ, ಸರಕಾರವನ್ನು ಎದುರು ಹಾಕಿಕೊಂಡರೂ ಸಹ ಹೋರಾಟದ ಮೂಲಕ ಸಹಕಾರಿ ಸಂಘವನ್ನು ಸ್ಥಾಪಿಸಿ, ರೈತರ ಅಡಗಿದ ಉಸಿರಿಗೆ ಧ್ವನಿಯಾದವರಲ್ಲಿ ಶ್ರೀಪಾದ ಹೆಗಡೆ ಕಡವೆಯವರ ಆದಿಯಾಗಿ ಅನೇಕ ಹಿರಿಯ ಸಹಕಾರಿ ಮುತ್ಸದ್ದಿಗಳು ಎದ್ದು ಕಾಣುತ್ತಾರೆ. ಅಂತವರ ದೂರದರ್ಶಿತ್ವದ ಫಲವಾಗಿ ಇಂದು ಪ್ರತಿ ಹಳ್ಳಿಯ ಅಂಚಿನಲ್ಲೊಂದು ಸಹಕಾರಿ ಸಂಘಗಳು. ಅದೂ ಸಹ ಶತಮಾನಕ್ಕೂ ಅಧಿಕ ಕಾಲದಿಂದ ಸದೃಢವಾಗಿ ನಿಂತು, ಸಹಕಾರಿ ವ್ಯವಸ್ಥೆಗೊಂದು ಪ್ರೇರಣೆಯಾಗಿ ರಾಜ್ಯದಲ್ಲಿ ಮಾದರಿಯಾಗಿದ್ದು ಈಗ ಇತಿಹಾಸ. ಅಂದಿನ ಹಿರಿಯರೂ ಸಹ ತಮ್ಮ ಮಕ್ಕಳು, ಮೊಮ್ಮಕ್ಕಳ ಬದುಕು ಹಸನಾಗಿರಲಿ ಎಂದು ತಾವು ಊರೂರು ಅಲೆದು ಕಷ್ಟಪಟ್ಟು ಸಹಕಾರಿ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿದ್ದರು. ಆ ಕಾರಣಕ್ಕಾಗಿಯೇ ಇಂದು ಬಹುತೇಕ ಹಳ್ಳಿಗರು ಮನೆಯಲ್ಲಿನ ಕೃಷಿಯನ್ನು ನೋಡಿಕೊಂಡು ಸಹಕಾರಿ ಸಂಘಗಳಲ್ಲಿಯೂ ಕೆಲಸ ನಿರ್ವಹಿಸುತ್ತಾ ಬದುಕು ನಡೆಸುತ್ತಿದ್ದಾರೆ. ಆ ಮೂಲಕ ಅಷ್ಟರ ಮಟ್ಟಿಗಾದರೂ ಪ್ರತಿಭೆಯ ವಲಸೆ ಕಡಿಮೆಯಾಗಿದೆ. ಈ ಕಾರಣಕ್ಕಾದರೂ ನಮ್ಮ ಪೂರ್ವಜರಿಗೆ ನಾವು ಶರಣೆನ್ನಲೇಬೇಕು.

ಆದರೆ ಕ್ರಮೇಣವಾಗಿ ಬದಲಾದ ಕಾಲಘಟ್ಟದಲ್ಲಿ ಇದ್ದ ಒಂದು ಎಕರೆ ತೋಟ-ಗದ್ದೆಗಳು ಮಕ್ಕಳಿಗೆ ಸಾಕಾಗದು ಎನ್ನುವ ಪಾಲಕರ ಮನೋಭಾವ ಮತ್ತು ಮಕ್ಕಳ ದೈವದತ್ತ ಬುದ್ಧಿವಂತಿಕೆ, ಶ್ರಮದ ಕಾರಣಕ್ಕೆ ಇಂದು ಮಲೆನಾಡಿನ ಪ್ರತಿ ಮನೆಯಿಂದಲೂ ಒಬ್ಬರು ಬೆಂಗಳೂರಿನಲ್ಲಿ ಕಾಣಸಿಗುತ್ತಾರೆ. ಅದೂ ಸಹ ಸಾಪ್ಟವೇರ್ ಇಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆನ್ಸಿ, ಎಂಬಿಎ, ಮೆಡಿಕಲ್ ಸೇರಿದಂತೆ ಪ್ರೊಪೆಷನಲ್ ವಿಭಾಗದಲ್ಲಿ ಹೆಚ್ಚಿನ ಒಲವು ತೋರಿದ್ದರ ಪರಿಣಾಮ ಓದಿರುವ ಕಾರಣಕ್ಕಾದರೂ ಕೆಲಸ ಹುಡುಕಿಕೊಂಡು ಪರವೂರಿಗೆ ಹೋಗುವುದು ಅನಿವಾರ್ಯವಾಯಿತು. ಆದರೆ ಅಲ್ಲಿಗೆ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಒಂದಷ್ಟು ಸುಧಾರಿಸಿದರೂ, ಇದೀಗ ಕಾಲ ಕಳೆದಂತೆ ಮತ್ತೊಂದು ಸಮಸ್ಯೆ ಬಹುದೊಡ್ಡ ತಲೆನೋವಾಗಿ ಕಾಡುತ್ತಿದೆ. ಮಕ್ಕಳೆಲ್ಲರೂ ಪರವೂರು, ಹಳ್ಳಿಗಳು ಹಿರಿಯರೂರು ಎಂಬಂತೆ ಜಿಲ್ಲೆಯ ಬಹುತೇಕ ಹಳ್ಳಿಗಳು ವೃದ್ಧಾಶ್ರಮವಾಗುತ್ತಿದೆ. ಈ ಹೊತ್ತಿಗೆ ಇಂದಿನ ತಲೆಮಾರಿನ ಹಿರಿಯರು, ಯುವಕರು ಮುಂದಿನ ನಮ್ಮ ತಲೆಮಾರಿನ ಭವಿಷ್ಯದ ಹಿತ ದೃಷ್ಟಿಯಿಂದ ಯೋಚಿಸುವ ಕಾಲ ಸನ್ನಿಹಿತವಾಗಿದೆ.

ಕೊವಿಡ್ ನಂತರ ಹಲವರದ್ದು ವರ್ಕ್ ಪ್ರೊಮ್ ಹೋಮ್:
ಕೊವಿಡ್ ಮಹಾಮಾರಿ ವರ್ಕ್ ಪ್ರಾಮ್ ಹೋಮ್ ಕಾರಣಕ್ಕೆ ಕೆಲವರಿಗೆ ಅನುಕೂಲ ಮಾಡಿಕೊಟ್ಟಿದೆ. ಇದೀಗ ಕೆಲವರದ್ದಂತೂ ಖಾಯಂ ವರ್ಕ್ ಪ್ರೋಮ್ ಹೋಮ್. ಆ ಮೂಲಕ ಮನೆಯಲ್ಲಿ ಕೃಷಿ ಜೊತೆಗೆ ಮನೆಯಿಂದಲೇ ಐಟಿ ಪೀಲ್ಡ್ ನಲ್ಲಿ ಕೆಲಸ ನಡೆಸುತ್ತಿರುವುದೂ ಸಹ ತುಸು ಸಮಾಧಾನದ ಸಂಗತಿ. ಹೀಗಿರುವಾಗ ಭವಿಷ್ಯದ ನಮ್ಮ ತಲೆಮಾರಿಗಾಗಿ ಒಂದು ಹೆಜ್ಜೆ ದೃಢವಾಗಿ ಊರೂವ ಅನಿವಾರ್ಯ ನಮ್ಮೆದುರಿದೆ. ಜಿಲ್ಲೆಯಲ್ಲೊಂದು ಸುಸಜ್ಜತ ಐಡಿ ಪಾರ್ಕ್ ನಿರ್ಮಾಣವಾದಲ್ಲಿ ಅನೇಕರಿಗೆ ಇದರಿಂದ ಅನುಕೂಲವಾದೀತು.

300x250 AD

ವ್ಯವಸ್ಥಿತ ಐಟಿ ಪಾರ್ಕ್ ಸ್ಥಾಪನೆಯಾಗಲಿ:
ಜಿಲ್ಲೆಯಲ್ಲೊಂದು ವ್ಯವಸ್ಥಿತ, ಸುಸಜ್ಜಿತ ಐಟಿ ಪಾರ್ಕ್ ಸ್ಥಾಪನೆಯಾದಲ್ಲಿ ಬಹುತೇಕರಿಗೆ ಅನುಕೂಲವಾದೀತು. ಆ ಮೂಲಕ ತಮ್ಮ ವೃತ್ತಿಯ ಜೊತೆಗೆ ಕೃಷಿಯನ್ನೂ ಮಾಡಬಹುದಾಗಿದ್ದು, ಇದರ ಪರಿಣಾಮವಾಗಿ ಅನಿವಾರ್ಯವಾಗಿ ಮಾರಾಟವಾಗುತ್ತಿರುವ ಕೃಷಿ ಭೂಮಿಯ ಮಾರಾಟವನ್ನು ಕಡಿಮೆ ಮಾಡಬಹುದು. ಜಿಲ್ಲೆಯಲ್ಲಿ ಕನಿಷ್ಟ ಐದು ಸಾವಿರ ಜನರಿಗೆ ಉದ್ಯೋಗ ನಿರ್ವಹಿಸುವ ಐಟಿ ಪಾರ್ಕ್ ಸ್ಥಾಪನೆಯಾದಲ್ಲಿ ಐದು ಸಾವಿರ ಕುಟುಂಬಗಳಿಗೆ ಇದರ ನೇರ ಲಾಭ ದೊರೆಯಲಿದೆ. ಈ ಪ್ರಮಾಣದ ಐಟಿ ಪಾರ್ಕ್ ನಿರ್ಮಾಣದ ಕಾರ್ಯ ಯಾವುದೋ ಒಬ್ಬ ವ್ಯಕ್ತಿಯಿಂದ ಕಷ್ಟಸಾಧ್ಯ. ಆದರೆ ಜಿಲ್ಕೆಯ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ ಯೋಚಿಸಿ ದೃಢ ನಿರ್ಧಾರ ಕೈಗೊಂಡಲ್ಲಿ, ನಿಜಕ್ಕೂ ಉದೊಂದ ಈ ಶತಮಾನದ ಅಚ್ಛಳಿಯದ ಸಾಧನೆಯಾಗುವುದರಲ್ಲಿ ಎರಡು ಮಾತಿಲ್ಲ.

ದೆಲ್ಲಿಯ ಕೆಲಸವೂ ಇದೀಗ ಹಳ್ಳಿಗಳಲ್ಲಿ..
ವರ್ಕ್ ಪ್ರಾಮ್ ಹೋಮ್ ಆರಂಭವಾದಾಗಿನಿಂದ ವಿದೇಶದ ಕೆಲಸವೂ ನಮ್ಮೂರಿನ ಬೆಟ್ಟದ ಮೇಲಿನ ಮಾಳದಲ್ಲಿಂದ ನಡೆಯುತ್ತಿದೆ. ಆದರೆ ವ್ಯವಸ್ಥಿತ ಇಂಟರ್ನೆಟ್ ಸೌಲಭ್ಯವಿರಬೇಕಷ್ಟೇ. ಈ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡ, ಅವಶ್ಯಕತೆಯುಳ್ಳ ಸೌಲಭ್ಯಗಳನ್ನು ಸೃಷ್ಟಿಸಿಕೊಂಡು ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಹೊರಗಡೆಯಿಂದ ಕಂಪನಿಗಳನ್ನು ಆಹ್ವಾನಿಸಿದರೆ, ಅಥವಾ ನಮ್ಮ ಜಿಲ್ಲೆಯ ಜನರನ್ನೇ ಇಲ್ಲಿಗೆ ಮರಳಿ ಬರುವಂತೆ ಮಾಡುವಂತಾಗಬೇಕು. ಆದರೆ ಅದು ಸುಲಭದ ಮಾತಲ್ಲ. ಈಗಾಗಲೇ ಐಟಿಪಾರ್ಕ್ ಮಾದರಿಯಲ್ಲಿ ಶಿರಸಿ ಟೆಕ್ ಪಾರ್ಕ್ ಸಕಲ ಸೌಲಭ್ಯಗಳನ್ನು ನೀಡುವ ಕಂಪನಿಯೊಂದು ತಲೆಯೆತ್ತಿದೆ. ಇಂತಹುವುದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ. ಆದರೆ ವ್ಯಕ್ತಿಕೇಂದ್ರಿತ ವ್ಯವಸ್ಥೆಗೂ ಸಂಘಟಿತ ಸಂಸ್ಥೆಗಳ ಮುಖೇನ ನೀಡುವ ವ್ಯವಸ್ಥೆಗೂ ಬಹು ಅಂತರವಿರುತ್ತದೆ. ವ್ಯಕ್ತಿಗೆ ಬಹುಕಾಲ ಕಡಿಮೆ ಆದಾಯದಲ್ಲಿ ನಿರ್ವಹಣೆ ನಡೆಸುವುದು ಕಷ್ಠಕರ. ಅದೇ ಸಂಸ್ಥೆಗಳು ಮುಂದಾದಲ್ಲಿ ಸವಾಲುಗಳು ಇದ್ದರೂ ಸಹ ತರಗೆಲೆಗಳಂತೆ ಉದುರಿಹೋಗುತ್ತವೆ. ಆ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಒಗ್ಗೂಡಿ, ಒಂದು ವ್ಯವಸ್ಥೆಯನ್ನು ನಿರ್ಮಿಸಿಕೊಂಡು, ಜಿಲ್ಲೆಯಲ್ಲೊಂದು ಸುಸಜ್ಜಿತ ಐಟಿ ಪಾರ್ಕ್ ನಿರ್ಮಾಣ ಮಾಡುವಂತಾಗಬೇಕು. ಆ ಮೂಲಕ ಭವಿಷ್ಯದಲ್ಲಿ ನಮ್ಮೂರಿನ ಪ್ರತಿಭೆ, ನಮ್ಮ ನಡುವೆಯೇ ಇರುವಂತಾಗಬೇಕು. ಜೊತೆಗೆ ನಮ್ಮ ಕೃಷಿಭೂಮಿಯೂ ನಮ್ಮ ಹಿಡಿತದಿಂದ ಕೈ ತಪ್ಪದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.

(ಮುಂದುವರೆಯುವುದು)

Share This
300x250 AD
300x250 AD
300x250 AD
Back to top