ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಡಾ.ಎನ್. ಆರ್. ನಾಯಕ್ ಬಯಲು ರಂಗಮಂದಿರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಪಿ.ಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ನಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿತು ಉನ್ನತ ಸ್ಥಾನ ಮಾನ ಪಡೆದು ಒಳ್ಳೆಯ ಹುದ್ದೆಯಲ್ಲಿರುವ ಪೂರ್ವ ವಿದ್ಯಾರ್ಥಿಗಳೇ ನಮ್ಮ ಕಾಲೇಜಿನ ಶಕ್ತಿ. ಅದು ಹೇಗೆಂದರೆ ಹಳೆ ಬೇರು , ಹೊಸ ಚಿಗುರು ಅನ್ನುವ ವಿಚಾರದ ಮೇಲೆ ಕಾಲೇಜು ನಡೆಯುತ್ತಿವೆ. ನಮ್ಮ ಸಂಸ್ಥೆ ಲಾಭದಾಯಕ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಒಳ್ಳೆಯ ವಿದ್ಯೆಯನ್ನು ನೀಡಿ , ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವುದೇ ನಮ್ಮ ಗುರಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ದಂತವೈದ್ಯ ಶಿವಮೊಗ್ಗ ಡಾ. ಶೀಲಾ ವಿಜಯ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಾವೆಲ್ಲ ಕುಟುಂಬದ ವಾತಾವರಣದಲ್ಲಿ ಕಲಿಯುತ್ತಾ ಬಂದಿರುತ್ತೇವೆ. ಶಾಲೆಯಿಂದ ಶಿಕ್ಷಣ ಆರಂಭಿಸಿ ಉದ್ಯೋಗ ಸೇರಿದ ನಂತರವೂ ಕಲಿಕೆ ನಿರಂತರ.ಈ ಮೊದಲು ಸಂಸ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ ಈಗ ಇತರೆ ಚಟುವಟಿಕೆಗಳಿಗೆ ಸಮಯ ನೀಡುವುದು ಕಷ್ಟ. ಎಸ್.ಡಿ.ಎಂ.ಕಾಲೇಜಿನಲ್ಲಿ ಸಂಸ್ಕಾರ ನೀಡುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದ ಶೈಕ್ಷಣಿಕ ಸಂಸ್ಥೆ ಇದು ಎಂದರು. ವಿಶ್ವದಾದ್ಯಂತ ಎಸ್.ಡಿ.ಎಂ.ಕಾಲೇಜು ವಿದ್ಯಾರ್ಥಿಗಳು ತಮ್ಮದೆ ಆದಂತಹ ಛಾಪನ್ನು ಮೂಡಿಸಿದ್ದಾರೆ. ಯಾವುದೇ ಹೊಸ ಕೋರ್ಸ್ ಬಂದರೂ , ವಿದ್ಯಾರ್ಥಿಗಳ ಭಾಗವಹಿಸುವಿಕೆ ಮಹತ್ವದ್ದು ಎಂದರು. ಪಿಯುಸಿ ಎರಡು ವರ್ಷಗಳ ಕಾಲ ತಪಸ್ಸಿನಂತೆ ತೊಡಗಿಸಿಕೊಳ್ಳಿ ಎಂದು ಕಿವಿಮಾತು ನೀಡುತ್ತಾ, ಜೀವನೋಪಾಯಕ್ಕೆ ಪಿಯುಸಿ ಭದ್ರ ಬುನಾದಿ ಒದಗಿಸುತ್ತದೆ ಎಂದು ನುಡಿದರು.
ಪದವಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಡಿ.ಎಲ್.ಹೆಬ್ಬಾರ್ ಮಾತನಾಡುತ್ತಾ ಎಸ್.ಡಿ.ಎಂ.ಕಾಲೇಜು ಹೊನ್ನಾವರ ರಾಜ್ಯದ ಉಳಿದ ಜಿಲ್ಲೆಗಳ ಕಾಲೇಜಿಗೆ ಕಡಿಮೆ ಇಲ್ಲ. ಪಿಯುಸಿಯಲ್ಲಿ ಉತ್ತಮ ಶಿಕ್ಷಣ ಪಡೆಯಿರಿ. ಎರಡು ವರ್ಷ ಭದ್ರ ನೆಲೆಗಟ್ಟು ಹೊಂದಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಿ. ಶಿಕ್ಷಣದ ಜೊತೆಗೆ ಎಲ್ಲಾ ಜ್ಞಾನ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಚ್.ಭಟ್ ಮಾತನಾಡಿ ಕಾಲೇಜಿನ ವರ್ಷದ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಾಧನೆ ಮಾಡಿರುವುದನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮ ಇದಾಗಿರುತ್ತದೆ.ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ಸುಸಂಪನ್ನವಾಗಿದೆ. ವಿದ್ಯಾರ್ಥಿಗಳು ಸಾಧನೆಯನ್ನು ಮಾಡುವಂತಾಗಬೇಕು. ಗುರಿಯನ್ನು ಬೆನ್ನಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹೊನ್ನಾವರ ತಾಲೂಕಿನ ಅಗ್ನಿಶಾಮಕ ಠಾಣೆಯ ಮುಖ್ಯಸ್ಥರಿಗೆ ವೇದಿಕೆ ಮೇಲೆ ಗೌರವಿಸಲಾಯಿತು. ಅಲ್ಲದೆ 2023-24 ನೇ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಎಂ.ಪಿ.ಇ.ಸೊಸೈಟಿ ಆಡಳಿತ ಮಂಡಳಿಯ ಸದಸ್ಯರು, ನಿವೃತ್ತ ಪ್ರಾಂಶುಪಾಲರು ,ಪೂರ್ವ ವಿದ್ಯಾರ್ಥಿಗಳು, ಪಾಲಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ವಿನಾಯಕ ಭಟ್, ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ , ವಿದ್ಯಾರ್ಥಿ ಒಕ್ಕೂಟದ ಎಂ.ಎನ್.ಅಡಿಗುಂಡಿ ಸ್ವಾಗತಿಸಿದರು. ಉಪನ್ಯಾಸಕಿ ಹೇಮಾ ಭಟ್ ವರದಿ ವಾಚಿಸಿದರು. ಉಪನ್ಯಾಸಕಿ ಸ್ವಾತಿ.ಡಿ.ಜಿ ವಂದಿಸಿದರು.