Slide
Slide
Slide
previous arrow
next arrow

ಕೌಶಲ್ಯದ ಕೊರತೆಯಿಂದ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಭೀಮಣ್ಣ ನಾಯ್ಕ

300x250 AD

ಶಿರಸಿ: ಕೌಶಲ್ಯದ ಕೊರತೆಯಿಂದ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಳವಳ ವ್ಯಕ್ತಪಡಿಸಿದರು. ಸ್ಕೊಡ್‌ವೆಸ್ ಸಂಸ್ಥೆ ದೇಸಾಯಿ ಫೌಂಡೇಶನ್ ಸಹಯೋಗದಲ್ಲಿ ವಿವಿಧ ಕೌಶಲ್ಯಗಳ ಕುರಿತು ತರಬೇತಿ ಪಡೆದ ಸುಮಾರು 300ಕ್ಕೂ ಹೆಚ್ಚು ಯುವಕ-ಯುವತಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಿ, ಹೊಸ ತರಬೇತಿಗಳ ಶಿಬಿರಗಳನ್ನು ಉದ್ಘಾಟಿಸಿ ಸಂಸ್ಥೆಯ ಹೊಸ ವರ್ಷದ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಪ್ರತೀವರ್ಷ ವಿವಿಧ ವಿಷಯಗಳಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚು ಜನ ಪದವಿಯೊಂದಿಗೆ ಹೊರಬರುತ್ತಿದ್ದು ನಿರುದ್ಯೋಗ ಕ್ಷೇತ್ರದಲ್ಲಿ ವ್ಯಾಪಕ ಪೈಪೋಟಿ ಉಂಟಾಗುತ್ತಿದೆ. ಈ ಸಂದರ್ಭದಲ್ಲಿ ಅಪೇಕ್ಷಿತ ಕೆಲಸದಲ್ಲಿನ ಅನುಭವ ಹಾಗೂ ಕೌಶಲ್ಯ ಹೊಂದಿದವರು ಮಾತ್ರ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿಯೇ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಬಲ್ಲ ಕೌಶಲ್ಯಗಳ ವಿಷಯಾಧಾರಿತ ತರಬೇತಿಯನ್ನು ನೀಡುವ, ಪರಿಚಯಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಕುಮಾರ ಕೂರ್ಸೆ ಮಾತನಾಡಿ, ಕೆಲವರಿಗೆ ತರಬೇತಿ ಪಡೆಯುವ ಸಂದರ್ಭದಲ್ಲಿ ಇರುವ ಆಸಕ್ತಿ ಉದ್ಯೋಗ ಹೊಂದುವ ಸಂದರ್ಭದಲ್ಲಿ ಇರುವುದಿಲ್ಲ. ಅಲ್ಲದೇ ಪಡೆದ ತರಬೇತಿಯನ್ನು ಅನುಭವವನ್ನಾಗಿಸಿಕೊಳ್ಳದೇ ಅತಿಯಾದ ವೇತನ ಮತ್ತು ಸೌಲಭ್ಯಗಳನ್ನು ನಿರೀಕ್ಷಿಸುವುದರಿಂದ ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಉದ್ಯೋಗದಲ್ಲಿ ಯಶಸ್ವಿಯಾಗಬೇಕಾದರೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ನಿರ್ದೇಶಕ ಕೆ.ಎನ್.ಹೊಸಮನಿ, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಜ್ಞಾನ, ಕೌಶಲ್ಯ ಹಾಗೂ ಅನುಭವಗಳು ಬೇರೆ ಬೇರೆಯೇ ಆಗಿದ್ದು ಯಾವ ವ್ಯಕ್ತಿ ತನ್ನ ಗುರಿಯನ್ನು ಮುಟ್ಟಲು ಈ ಮೂರು ಅಂಶಗಳನ್ನು ವ್ಯಕ್ತಿಗತವಾಗಿ ಅಳವಡಿಸಿಕೊಂಡು ಸಮಯೋಚಿತವಾಗಿ ಬಳಸಿಕೊಂಡಲ್ಲಿ ಪ್ರತಿಯೊಬ್ಬರೂ ಉದ್ಯೋಗಸ್ಥರಾಗಲು ಸಾಧ್ಯ ಎಂದರು.

300x250 AD

ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿಕಟಪೂರ್ವ ನಿರ್ದೇಶಕಿ ಸರಸ್ವತಿ ಎನ್. ರವಿಯವರು ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರ ಕೌಶಲ್ಯ ವರ್ಧನೆಗೆ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಸಭೆಗೆ ಪರಿಚಯಿಸಿ ಆಸಕ್ತ ಅಭ್ಯರ್ಥಿಗಳು ತರಬೇತಿಯ ಉಪಯೋಗಗಳನ್ನು ಪಡೆದುಕೊಳ್ಳಲು ಸೂಚಿಸಿದರು. ಆರಂಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಜಿಲ್ಲಾ ಸಮನ್ವಯಾಧಿಕಾರಿ ಹೇಮಲತಾ ಚೌಗುಲೆ ಎಲ್ಲರನ್ನೂ ವಂದಿಸಿದರು. ಕಾರ್ಯಕ್ರಮಾಧಿಕಾರಿ ರಿಯಾಜ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು.

ಶಿರಸಿ-ಸಿದ್ದಾಪುರ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಲು ಅವಶ್ಯವಿರುವ ಸ್ಥಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲಭ್ಯವಿರುವ ಸ್ಥಳಗಳಲ್ಲೇ ಆಸಕ್ತ ಉದ್ದಿಮೆದಾರರು ಚಿಕ್ಕ ಚಿಕ್ಕ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ನಿಯಮಾವಳಿ ರೂಪಿಸಲು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಯುವಕ-ಯುವತಿಯರ ಉದ್ಯೋಗ ಸೃಷ್ಟಿಗೆ ರೂರಲ್ ಗಾರ್ಮೆಂಟ್ ಸ್ಥಾಪಿಸಲು ಕೆಲವು ಉದ್ದಿಮೆದಾರರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಗಾರ್ಮೆಂಟ್ಸ್ ಮಾಡಲು ಯಾವುದೇ ಉದ್ದಿಮೆದಾರರು ಮುಂದೆ ಬಂದಲ್ಲಿ ಅವಶ್ಯವಿರುವ ಸಹಕಾರ ನೀಡಲಾಗುವುದು.
-ಭೀಮಣ್ಣ ಟಿ ನಾಯ್ಕ,
ಶಾಸಕರು, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ

Share This
300x250 AD
300x250 AD
300x250 AD
Back to top