ಅಂಕೋಲಾ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ, ಶ್ರೀದೇವಿ ಯುವಕ ಮಂಡಳ ಭಾವಿಕೇರಿ (ರಿ.) ಇವರ ಸಹಯೋಗದಲ್ಲಿ ಯಕ್ಷ ಸಿಂಚನ ಮಿತ್ರ ಬಳಗದವರಿಂದ ಕು. ಪ್ರೀತಮ್ ರೋಹಿದಾಸ ನಾಯ್ಕ ಅವರ್ಸಾ ವಿರಚಿತ 6ನೇ ಯಕ್ಷ ಕೃತಿ ‘ಪುಷ್ತಯನಿ’ ಇದರ ಉದ್ಘಾಟನಾ ಸಮಾರಂಭವು ಹಾರವಾಡ ಗ್ರಾಪಂ ಹತ್ತಿರದ ಮೈದಾನದಲ್ಲಿ ನಡೆಯಿತು.
ವೇದಿಕೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮು ಅರ್ಗೆಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನನ್ನ ಹುಟ್ಟೂರಿನಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ, ಯುವ ಕಲಾವಿದರು ಕಲೆ, ಸಾಹಿತ್ಯ ಕಡೆಗೆ ಒಲವು ತೋರುತ್ತಿರುವುದು ಶ್ಲಾಘನೀಯ ಎಂದರು. ಕಾರವಾರದ ಸಹಾಯಕ ಆಯುಕ್ತರಾಗಿ , ಪ್ರಸ್ತುತ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲ ಸಚಿವರಾದ ಜಯಲಕ್ಷ್ಮಿ ‘ಪುಷ್ತಯನಿ’ ಯಕ್ಷ ಕೃತಿಯನ್ನು ಬಿಡುಗಡೆ ಮಾಡಿ ಯಕ್ಷಗಾನದ ಕುರಿತಾಗಿ ತಮಗಿರುವಂತಹ ಆಸಕ್ತಿಯನ್ನು ವ್ಯಕ್ತಪಡಿಸಿದರು. ಕೃತಿಯನ್ನು ಬರೆದಂತಹ ಲೇಖಕರಾದ ಕು. ಪ್ರೀತಮ್ ರೋಹಿದಾಸ ನಾಯ್ಕರ ಕುರಿತಾಗಿ ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರವಾಡಾ ಗ್ರಾಪಂ ಅಧ್ಯಕ್ಷೆ ಶೀಲಾ ಹಾರವಾಡೇಕರ ವಹಿಸಿದ್ದರು.
ಪ್ರಮುಖರಾದ ಪ್ರಮೋದ ಮಾಳ್ಸೇಕರ್ ಬಿಣಗಾ, ಸಂಜಯ ನಾಯ್ಕ ಭಾವಿಕೇರಿ, ಗಣಪತಿ ನಾಯ್ಕ್, ರೋಹಿದಾಸ ಎಂ. ನಾಯ್ಕ ಅವರ್ಸಾ ಉಪಸ್ಥಿತರಿದ್ದರು. ಸುಜೀತ ನಾಯ್ಕ ನಿರ್ವಹಿಸಿದರು. ತದನಂತರದಲ್ಲಿ ಪುಷ್ತಯನಿ ಯಕ್ಷಗಾನವು ಅದ್ಧೂರಿಯಾಗಿ ಪ್ರಥಮ ಪ್ರದರ್ಶನವನ್ನು ಕಂಡಿತು. ಸುತ್ತಲಿನ ಜನಸ್ತೋಮವು ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.