ಭಟ್ಕಳ: ತಾಲೂಕಾ ಆರೋಗ್ಯಾಧಿಕಾರಿ ಖಾಸಗಿ ಕ್ಲಿನಿಕ್‌ಗಳ ಮೇಲೆ ಎರಡನೇ ಸುತ್ತಿನ ದಾಳಿ ನಡೆಸಿ ಖಾಸಗಿ ಕ್ಲಿನಿಕ್‌ಗಳ ವೈದ್ಯರ ದಾಖಲೆಗಳನ್ನು ಪರಿಶೀಲನೆ ಮಾಡಿದರು.
ಮೊದಲ ಚನ್ನಪಟ್ಟಣ ಹನುಮಂತ ದೇವಸ್ಥಾನ ಸಮೀಪವಿರುವ ರಂಜನ್ ಕ್ಲಿನಿಕ್ ಮೇಲೆ ದಾಳಿ ನಡೆಸಿ ವೈದ್ಯ ವಿವೇಕ್ ಭಟ್ ದಾಖಲೆ ಪರಿಶೀಲನೆ ಮಾಡಿದಾಗ ಕೆ.ಪಿ.ಎಂ.ಇ. ಅಡಿಯಲ್ಲಿ ಇವರು ಯಾವುದೇ ನೋಂದಣಿ ಮಾಡಿಸಿಕೊಂಡಿರುವುದಿಲ್ಲ. ವೈದ್ಯಕೀಯ ಶಿಕ್ಷಣದ ದಾಖಲಾತಿ ಇಲ್ಲದಿರುವ ತಿಳಿದುಬಂದಿದ್ದು, ಅಲೋಪತಿ ಔಷಧಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ಕ್ಲಿನಿಕ್‌ನಲ್ಲಿ ಸ್ವಚ್ಛತೆಯ ಇಲ್ಲದೆ ಇರುವುದನ್ನು ಗಮನಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಕೂಡಲೇ ಕ್ಲಿನಿಕ್ ಮುಚ್ಚುವಂತೆ ಸೂಚನೆ ನೀಡಿದರು
ಬಳಿಕ ರಾಘವೇಂದ್ರ ಸ್ವಾಮಿ ಮಠದ ಸಮೀಪವಿರುವ ಧನ್ವಂತರಿ ಆಯುರ್ವೇದ ಹಾಗೂ ಪಂಚ ಕರ್ಮ ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿನ ವೈದ್ಯ ಡಾ. ಗಣೇಶ್ ಭಟ್ ಆಯುರ್ವೇದ ವೈದ್ಯಕೀಯ ಶಿಕ್ಷಣದ ದಾಖಲಾತಿಗಳನ್ನು ಹೊಂದಿದ್ದು, ಇವರು ಕೆ.ಪಿ.ಎಂ.ಇ. ಅಡಿಯಲ್ಲಿ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ದಾಖಲಾತಿಗಳನ್ನು ಹೊಂದಿದ್ದು ಡಾ. ಗಣೇಶ್ ಭಟ್ ತಮ್ಮ ಕ್ಲಿನಿಕ್ ನಲ್ಲಿ ಕೇವಲ ಆಯುರ್ವೇದ ಔಷಧಗಳನ್ನು ಮಾತ್ರ ಉಪಯೋಗಿಸುತ್ತಿರುವುದು ತಿಳಿದು ಬಂದಿದೆ. ಇದೆ ರೀತಿ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿ ವೈದ್ಯರಿಗೆ ಸೂಚನೆ ನೀಡಿದರು.