Slide
Slide
Slide
previous arrow
next arrow

ಮರಳೆಂಬ ಚಿನ್ನದ ಕೋಳಿ..! ಸಾವಿಗೂ, ನೋವಿಗೂ ಡೋಂಟ್ ಕೇರ್: ರಕ್ಷಣೆಗೆ ನಿಂತರೆ ಅಧಿಕಾರಿಗಳು..?

300x250 AD

ಸಾವಿನ ನೋವು ಮಾಸುವ ಮುನ್ನವೇ ಚಿಗುರಿದ ಮರಳುಗಾರಿಕೆ || ಸಾರ್ವಜನಿಕರ ಆಕ್ಷೇಪ

ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಅವೈಜ್ಞಾನಿಕವಾಗಿ ಮತ್ತು ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆಯಿಂದಾಗಿ ಶರಾವತಿ ನದಿ ಪಾತ್ರದ ಜನರು ಮತ್ತು ಕುಡಿಯುವ ನೀರನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ಅನೇಕ ಸಮಸ್ಯೆಗಳನ್ನು ಎದುರಿಸುವ ಆತಂಕಕ್ಕೆ ಒಳಗಾಗಿದ್ದಾರೆ. ಈ ಅಕ್ರಮ ದಂದೆ ಸಂಪೂರ್ಣ ಸ್ಥಗಿತಗೊಳಿಸುವಂತೆ ಸ್ಥಳೀಯ ಜನಪರ ಹೋರಾಟಗಾರರೊಬ್ಬರು ಪತ್ರಿಕಾ ಪ್ರಕಟಣೆ ನೀಡಿ ಅಕ್ರಮ ದಂದೆಯ ಕರಾಳ ಇತಿಹಾಸವನ್ನು ಬೆಳಕಿಗೆ ತಂದಿದ್ದಾರೆ.

ನದಿ ಉದ್ದಕ್ಕೂ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆಯಿಂದ ನದಿಪಾತ್ರದ ಒಳನಾಡು ಪ್ರದೇಶವು ಆಳವಾಗುತ್ತಿರುವುದರಿಂದ ಸಮುದ್ರದ ಉಬ್ಬರದ ಸಂದರ್ಭದಲ್ಲಿ ಉಪ್ಪು ನೀರು ಜೀವನದಿ ಶರಾವತಿಗೆ ಸೇರುವ ಭೀತಿ ಎದುರಾಗಿದೆ. ಇದರಿಂದ ಸಾವಿರಾರು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಇಡಗುಂಜಿ, ಮುರ್ಡೇಶ್ವರ ಯಾತ್ರಾ ಸ್ಥಳಕ್ಕೆ ಮತ್ತು ಹೊನ್ನಾವರ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ಕುಡಿಯುವ ನೀರಿನ ಯೋಜನೆಗೂ ಉಪ್ಪುನೀರು ಸೇರುವ ಹಾಗೂ ಮರಳು ಗಣಿಗಾರಿಕೆಯಿಂದ ಕಲುಷಿತೆಗೆ ಒಳಗಾಗುವ ಆತಂಕ ಎದುರಾಗಿದೆ.

ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸುಮಾರು ಐದು ನೂರಕ್ಕೂ ಹೆಚ್ಚು ಹೊರರಾಜ್ಯಗಳ ಕಾರ್ಮಿಕರು ನದಿತೀರಗಳಲ್ಲಿ ಬೀಡುಬಿಟ್ಟಿದ್ದು ಇವರ ಮಲಮೂತ್ರಗಳಳು ನದಿ ನೀರಿಗೆ ಸೇರಿ ನದಿ ಕಲುಷಿತಗೊಳ್ಳುತ್ತಿದೆ. ನದಿ ಪಾತ್ರದ ಎಡ ಮತ್ತು ಬಲದಂಡೆ ಪ್ರದೇಶದ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಏತನೀರಾವರಿ ಸೌಲಭ್ಯವನ್ನು ಹೊಂದಿದ್ದು ರೈತರಪಾಲಿಗೆ ಶರಾವತಿ ಸಂಜೀವಿನಿಯಾಗಿದೆ. ಆದರೆ ಈ ಭಾಗದಲ್ಲಿ ಲಂಗು-ಲಗಾಮಿಲ್ಲದೇ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆಯಿಂದ ಅಪಾರ ಪ್ರಮಾಣದ ದುಷ್ಪರಿಣಾಮಗಳು ಉಂಟು ಮಾಡುತ್ತಿರುವುದು ಜನರ ನೆಮ್ಮದಿಯನ್ನು ಹಾಳುಗೆಡವಿದೆ.

ಹೊನ್ನಾವರದಿಂದ ಗೇರುಸೊಪ್ಪೆವರೆಗಿನ 35 ಕಿ.ಮಿ ಉದ್ದದ ಶರಾವತಿ ನದಿಯಲ್ಲಿ ಎಲ್ಲೆಂದರಲ್ಲಿ ದಿನಂಪ್ರತಿ ನೂರಾರು ಯಾಂತ್ರಿಕೃತ ಮತ್ತು ನಾಡ ದೋಣಿಗಳ ಮೂಲಕ ಮರಳು ಮಾಫಿಯಾದವರಿಂದ ವಿವಿಧ ಪರಿಸರ ಮತ್ತು ಭೂ ವಿಜ್ಞಾನ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆದುಬಂದಿದೆ. ಈ ವಿಚಾರವನ್ನು ಪತ್ರಿಕೆಗಳು ಸರ್ಕಾರದ ಗಮನವನ್ನು ಸೆಳೆಯುತ್ತಲೇ ಬಂದಿವೆಯಾದರೂ ಚಿನ್ನದ ಮೊಟ್ಟೆ ಇಡುವ ಈ ಅಕ್ರಮದ ಬಗ್ಗೆ ಅಧಿಕಾರಿಗಳು ಜಾಣ ಕುರುಡನ್ನು ಪ್ರದರ್ಶಿಸುತ್ತಿರುವದು ವ್ಯವಸ್ಥೆಯನ್ನೇ ಅಣಕಿಸುವಂತಿದೆ.

ಕಾಲೇಜು ವಿದ್ಯಾರ್ಥಿಯೊಬ್ಬನ ಸಾವಿನಿಂದ ಕೆಲವು ದಿನ ಸ್ಥಗಿತಗೊಂಡಂತೆ ಕಂಡ ಅಕ್ರಮ ಮರಳು ಗಣಿಗಾರಿಕೆ ಈಗ ಧಿಡೀರ್ ತಲೆಎತ್ತಿದೆ. ಶರಾವತಿ ನದಿಯಲ್ಲಿ ಮರಳು ಮಾಫಿಯಾ ಪ್ರತಿ ನಿತ್ಯ ಸಂಜೆ 5 ಗಂಟೆ ನಂತರ ರಾತ್ರಿ ಪೂರ್ತಿ ಸದ್ದು ಮಾಡಲು ಆರಂಭಿಸಿದೆ. ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿದ ಮರಳನ್ನು ರಾತ್ರಿ ವೇಳೆ ನದಿ ದಡದಲ್ಲಿ ಅಲ್ಲಲ್ಲಿ ಆಯ್ದ ಸ್ಥಳಗಳಲ್ಲಿ ಶೇಖರಿಸಿ ಟಿಪ್ಪರ್, ಲಾರಿಗಳ ಮೂಲಕ ರಸ್ತೆ ಮಾರ್ಗದ ಮೂಲಕ ಶಿರಸಿ, ಸಿದ್ದಾಪುರ, ಕುಮಟಾ, ಕಾರವಾರ ಮತ್ತು ಗೋವಾ ಮುಂತಾದೆಡೆಗಳಲ್ಲಿ ಅಕ್ರಮವಾಗಿ ಸಾಗಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಈ ಅಕ್ರಮ ದಂಧೆ ಕೆಲವು ಅಧಿಕಾರಿಗಳ ಶಾಮೀಲಾತಿಯಲ್ಲಿಯೇ ಎಲ್ಲ ಅಡೆತಡೆಗಳನ್ನು ದಾಟಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ. ಅಕ್ರಮ ಮರಳು ಗಣಿಗಾರಿಕೆಗಾಗಿ ಶರಾವತಿ ನದಿಯಲ್ಲಿ ಪರಿಸರ ನಿಯಮಗಳ ವ್ಯಾಪಕ ಉಲ್ಲಂಘನೆ ನಡೆಯುತ್ತಿದ್ದು ಸರ್ಕಾರದ ಬೊಕ್ಕಸಕ್ಕೆ ಕೊಟ್ಯಂತರ ರೂಪಾಯಿಗಳ ನಷ್ಟ ಉಂಟಾಗುತ್ತಿದೆ ಎಂದು ಹೇಳಿವೆ. ಶರಾವತಿ ನದಿಯಲ್ಲಿ ಅವೈಜ್ಞಾನಿಕವಾಗಿ ಹಾಗೂ ಜನವಸತಿ ಇರುವ ಹಲವು ನಡುಗಡ್ಡೆಗಳ ಭೂರಚನೆಗೆ ಹಾನಿ ಆಗುವ ರೀತಿಯಲ್ಲಿ ಭೂಕೊರೆತ ಉಂಟಾಗುವಂತೆ ಹೈಗುಂದ, ಹೆರಂಗಡಿ ಕುರ್ವೆ, ಕರಿಕುರ್ವೆ, ಇತ್ಯಾದಿ ನಡುಗಡ್ಡೆಗಳ ಸುತ್ತಮುತ್ತ ಹಾಗೂ ನದಿಯ ಉದ್ದಕ್ಕೂ ಎಲ್ಲೆಂದರಲ್ಲಿ ಬೇಕಾಬಿಟ್ಟಿ 15ರಿಂದ 25 ಅಡಿ ಆಳದ ವರೆಗೆ ಮರಳು ಗಣಿಗಾರಿಕೆ ನಿತ್ಯವೂ ನಡೆಯುತ್ತಿದೆ.

ಈ ಅಕ್ರಮ ತಡೆಗಟ್ಟದಿದ್ದಲ್ಲಿ ಉಬ್ಬರದ ಸಂದರ್ಭದಲ್ಲಿ ಸಮುದ್ರದ ಉಪ್ಪುನೀರು ನದಿಗೆ ಸೇರುವ ಅಪಾಯ ಎದುರಾಗಿದ್ದು, ಲಕ್ಷಾಂತರ ಜನರಿಗೆ ಕುಡಿಯುವ ನೀರು ಸರಬರಾಜು ಆಗುತ್ತಿರುವ ವಿವಿಧ ಕುಡಿಯುವ ನೀರಿನ ಅಗತ್ಯ ಸೇವೆಗಳಿಗೆ ಮತ್ತು ಯೋಜನೆಗಳಿಗೆ ವ್ಯತ್ಯಯ ಉಂಟಾಗಲಿದೆ ಎನ್ನುವುದನ್ನು ಹಾಗೂ ಈ ಭಾಗದಲ್ಲಿ ರೈತರ ಸಾವಿರಾರು ಎಕರೆ ಬೇಸಾಯದ ಜಮೀನುಗಳಿಗೆ ನೀರುಣಿಸುವ ಏತನೀರಾವರಿ ಘಟಕಗಳು ಸ್ಥಗಿತಗೊಳ್ಳುವ ಭೀತಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನುವದನ್ನು ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯು ಜಿಲ್ಲಾಧಿಕಾರಿಗಳ ಗಮನ ಗಮನ ಸೆಳೆದಿದ್ದಾರೆ.

300x250 AD

ಹೊನ್ನಾವರ ತಾಲ್ಲೂಕಿನ ಶರಾವತಿ ನದಿಯಲ್ಲಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಹಾಗೂ ಸಮುದ್ರದ ಉಪ್ಪುನೀರು ನದಿಗೆ ಸೇರದಂತೆ ಮತ್ತು ನದಿ ನೀರು ಕಲುಷಿತಗೊಳ್ಳದಂತೆ ಮರಳು ಗಣಿಗಾರಿಕೆ ನೀತಿಯಲ್ಲಿ ಅಗತ್ಯ ಬದಲಾವಣೆ ತರಲು ಮಧ್ಯಪ್ರವೇಶ ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.


ಕಾಲೇಜು ವಿದ್ಯಾರ್ಥಿಯೊಬ್ಬನ ಸಾವಿನಿಂದ ಕೆಲವು ದಿನ ಸ್ಥಗಿತಗೊಂಡಂತೆ ಕಂಡ ಅಕ್ರಮ ಮರಳು ಗಣಿಗಾರಿಕೆ ಈಗ ಧಿಡೀರ್ ತಲೆಎತ್ತಿದೆ. ಅಧಿಕಾರಿಗಳ ಸಾಮೀಲಾತಿಯಿದೆ. ಸರಕಾರಕ್ಕೆ ರಾಜಧನ ನಷ್ಟವಾಗುತ್ತಿದೆ. ಜಿಲ್ಲಾಧಿಕಾರಿಯವರು ಮಧ್ಯಪ್ರವೇಶ ಮಾಡಿಬೇಕು.– ಹಿರಿಯ ಸಾಮಾಜಿಕ ಹೋರಾಟಗಾರ


ಸಾವಿಗೂ, ನೋವಿಗೂ ಡೋಂಟ್ ಕೇರ್ : ರಕ್ಷಣೆಗೆ ನಿಂತರೆ ಅಧಿಕಾರಿಗಳು..?

ಮರಳುಗಾರಿಕೆ ಅವಾಂತರಕ್ಕೆ ಸಾವು ನೋವು ಆಗಾಗ ನಡೆಯುತ್ತಲೆ ಇದೆ. ಆ ಸಾವು ನೋವು ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗುತ್ತಿದೆ ಎನ್ನುವುದು ಬಿಟ್ಟರೆ, ಅಕ್ರಮ ದಂದೆ ನಡೆಸುವವರಿಗೆ ಆಗಲಿ, ಅವಕಾಶ ಮಾಡಿಕೊಟ್ಟ ಅಧಿಕಾರಿ ವಲಯಕ್ಕೆ ಆಗಲಿ, ಆಳುವ ಜನಪ್ರತಿನಿಧಿಗಳಿಗಾಗಲಿ ಅನ್ವಯವಾದಂತೆ ಕಂಡು ಬರುವುದಿಲ್ಲ. ಘಟನೆ ನಡೆದು ಸಾವಿನ ನೋವು ಆರುವಷ್ಟರಲ್ಲಿ ಅಕ್ರಮ ಮರಳು ದಂದೆ ಪ್ರಾರಂಭಗೊಳ್ಳುತ್ತಿದೆ.

ಕಾಲೇಜು ವಿದ್ಯಾರ್ಥಿ ಅಲ್ಪಾವಧಿ ದುಡಿತಕ್ಕೆ ಹೋಗಿ ಟಿಪ್ಪರ್ ಹರಿದು ಮೃತ ಪಟ್ಟ ಕೆಲವೇ ದಿನದಲ್ಲಿ ಮರಳು ದಂದೆ ಪ್ರಾರಂಭಗೊಂಡಿದೆ. ತಮ್ಮ ಊರಿನಲ್ಲಿ ಇಂತ ಘಟನೆ ನಡೆದಿದೆ ಎಂದು ಮರಳುಗಾರಿಕೆ ಬಂದ ಮಾಡುವ ಗ್ರಾಮಸ್ಥರ ಪ್ರಯತ್ನವು ಫಲ ಕೊಡುತ್ತಿಲ್ಲ. ಇನ್ನೂ ಜಾಗ ಕೊಟ್ಟವರು ಮುಂಗಡ ಹಣೆ ಪಡೆದು, ವರ್ಷದ ಅನುಮತಿ ಕೊಟ್ಟಿದ್ದು ಸಂದಿಗ್ದ ಸ್ಥಿತಿಗೆ ತಲುಪಿದಂತಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ದಂದೆ ನಡೆಸುವವರಲ್ಲಿ ಕೆಲವರ ನಡವಳಿಕೆ ವಿಪರೀತ ಆಗಿರುವುದು ಕೂಡ ಗ್ರಾಮಸ್ಥರಿಗೆ ಭಯಕ್ಕೆ ಕಾರಣವಾಗಿದೆ. ಒಳಗೊಳಗೆ ಚರ್ಚೆ ನಡೆಸುತ್ತಾರೆ ಬಿಟ್ಟರೆ ನೇರ ಆಕ್ಷೇಪ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮರಳಿನಲ್ಲಿ ಚಿನ್ನದ ಮೊಟ್ಟೆ ಬೆಳೆಯುತ್ತಿರುವ ದಂದೆ ಕೊರರಿಂದ ಹಲವಾರು ಪಲಾನುಭವಿಗಳಿದ್ದು ಅದರ ರುಚಿಗೆ ತನ್ನ ಹುದ್ದೆಯ ಗೌರವ, ಘನತೆ ಎಲ್ಲವನ್ನು ಅಡವಿಗೆ ಇಟ್ಟಿವರಂತೆ ವರ್ತಿಸುತ್ತಿದ್ದಾರೆ.

ಒಂದು ಮರಳು ವಾಹನ ಎಲ್ಲಾ ಇಲಾಖೆಗೆ ಸೇರಿ 60 ಸಾವಿರ ಹಣ ಸಂದಾಯ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನೂ ಬೇರೆ ತಾಲೂಕಿನಲ್ಲಿ ಸಂದಾಯ ಮಾಡುವ ಕಪ್ಪ ಕಾಣಿಕೆ ಬೇರೆಯಾಗಿದೆ. ತಾಲೂಕಿನಲ್ಲಿ ಲೆಕ್ಕ ಸಿಗದಷ್ಟು ಮರಳು ವಾಹನ ಇದ್ದು, ಅದರ ನಿರ್ವಹಣೆಗೆ ಕೆಲವು ಸಿಬ್ಬಂದಿಯನ್ನೇ ನಿಯೋಜಿಸಿದ ಹಾಗೆ ಕಂಡು ಬರುತ್ತಿದೆ. ಒಟ್ಟಾರೆ ತಾಲೂಕಿನಲ್ಲಿ ಬಂಡವಾಳ ಹೂಡದೆ ಕೋಟಿ ಕೋಟಿ ವ್ಯವಹಾರ ನಡೆಸುತ್ತಿದ್ದಾರೆ. ಅಕ್ರಮ ದಂದೆಸೂರರೇ ಅಧಿಕಾರಿ ವಲಯಕ್ಕೆ ಆಪ್ತಬಳಗದವರಾಗಿದ್ದಾರೆ. ಒಂದು ಹಂತದಲ್ಲಿ ಅಕ್ರಮ ಮಾಡುವವರು ಸದ್ಯದ ಮಟ್ಟಿಗೆ ಟ್ಯಾಕ್ಸ್ ಕಟ್ಟಿದ ರೀತಿಯಲ್ಲಿ ತಪ್ಪದೆ ಅತೀ ಹೆಚ್ಚು ಹಣ ಸಂದಾಯ ಮಾಡುವ ಸಾಲಿನಲ್ಲಿ ಮೊದಲಿಗರಾದಂತೆ ಕಂಡು ಬರುತ್ತಿದೆ. ಹಾಗಾಗಿ ಸಾವಿಗೂ, ನೋವಿಗೂ ಹೆದರದೆ, ಡೋಂಟ್ ಕೇರ್ ಎಂದು ಮುನ್ನುಗ್ಗುತ್ತಿರುವುದಕ್ಕೆ ಅಧಿಕಾರಿಗಳ ರಕ್ಷಣೆ ಇಲ್ಲವೇ ಇಲ್ಲ ಎಂದುಕೊಂಡರೆ ತಪ್ಪಾದಿತು.

ಹೋರಾಟಗಾರರು ಮೌನ :
ತಾಲೂಕಿನಲ್ಲಿ ಹೋರಾಟಗಾರರಿಗೆ ಬರವಿಲ್ಲ. ಕಳೆದ ಕೆಲವು ವರ್ಷದಿಂದ ಅಬ್ಬರಿಸುತ್ತಿದ್ದ ತಾಲೂಕಿನ ಹಿತ ಚಿಂತಕರು ಈಗೀಗ ಮೌನಕ್ಕೆ ಜಾರಿದ್ದಾರೆ. ವಿದ್ಯಾರ್ಥಿ ಸಾವು ಕಂಡರೂ ಹೋರಾಟಗಾರರ ದ್ವನಿ ಮೊಳಗಲಿಲ್ಲ. ಇನ್ನೂ ಮಹಿಳಾ ಹೋರಾಟಗಾರರು, ಸ್ವ ಸಹಾಯ ಸಂಘದ ಪ್ರಮುಖರು ಗ್ಯಾರಂಟಿಯಲ್ಲಿ ಮುಳುಗಿದಂತಿದೆ. ಅದರ ಜೊತೆ ಹೋರಾಟಗಾರರಿಗೆ ರಾಜಕೀಯ ನಂಟು ಇರುವುದು, ಒಂದು ಹಂತಕ್ಕೆ ತಲುಪಿದ ಮೇಲೆ ತಮ್ಮ ಪಯಣದ ಮಾರ್ಗ ಬದಲಿಸುವುದು ಹಿಂದಿನಿಂದಲು ರೂಢಿಯಲ್ಲಿ ಬಂದಿದ್ದು. ಒಟ್ಟಾರೆ ಇತ್ತೀಚಿಗೆ ಹೋರಾಟಗಾರರು ಮೌನ ವಹಿಸಿದ್ದು ಚರ್ಚೆಯಲ್ಲಿರುವುದು ಸತ್ಯ.

Share This
300x250 AD
300x250 AD
300x250 AD
Back to top