Slide
Slide
Slide
previous arrow
next arrow

ಸಾಧನೆ ಯಾರೊಬ್ಬರ ಸ್ವತ್ತಲ್ಲ: ಶ್ರೀಮಾರುತಿ ಗುರೂಜಿ

300x250 AD

ಹೊನ್ನಾವರ: ಸಾಧನೆ ಯಾರೊಬ್ಬರ ಸ್ವತ್ತಲ್ಲ, ಅದು ಯಾರು ಶ್ರಮಿಸುತ್ತಾರೋ ಅವರಿಗೆ ಒಲಿಯುತ್ತದೆ, ವಿದ್ಯಾರ್ಥಿಗಳೊಳಗಿನ ಸುಪ್ತ ಪ್ರತಿಭೆಯನ್ನು ಹೊರತಂದು ಅವರನ್ನು ಸಾಧನೆಯ ದಾರಿಯಲ್ಲಿ ನಡೆಸುವುದು ಶಿಕ್ಷಕರ ಹಾಗೂ ಶಾಲೆಯ ಕೆಲಸ ಎಂದು ಧರ್ಮಾಧಿಕಾರಿಗಳಾದ ಶ್ರೀಮಾರುತಿ ಗುರೂಜಿಯವರು ಹೇಳಿದರು.

ಅವರು ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ & ಪಿ. ಯು. ಕಾಲೇಜ್‌ನಲ್ಲಿ ‘ಅನ್ವೇಶ’ ಇದರ ಶಾಲಾ ವಾರ್ಷಿಕೋತ್ಸವದ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಈ ಸಮಾರಂಭವನ್ನು ‘ಅನ್ವೇಶ’ ಎಂದು ಕರೆದಿರುವುದರ ಹಿಂದಿನ ಮಹತ್ವವನ್ನು ವಿವರಿಸುತ್ತಾ ಅನ್ವೇಶ ಎಂದರೆ ಹುಡುಕುವುದು, ಕೇವಲ ಹೊಸತನ್ನು ಮಾತ್ರವಲ್ಲ ಮರೆತುಹೋದ ನಮ್ಮ ಸಂಸ್ಕೃತಿಯನ್ನು ಸಹ ಮರಳಿ ಅನ್ವೇಶಿಸುವುದು ಅತ್ಯಗತ್ಯ, ಮಕ್ಕಳೊಳಗಿನ ಪ್ರತಿಭೆಯನ್ನು ಅನ್ವೇಶಿಸಲು ಈ ವೇದಿಕೆ ನೆರವಾಗಲಿ ಎಂದು ಹಾರೈಸಿದರು. ವಿದ್ಯಾರ್ಥಿಗಳು ಸಾಧನೆಮಾಡಿ ಹೆತ್ತವರಿಗೆ, ಶಿಕ್ಷಕರಿಗೆ, ಶಾಲೆಗೆ ಕೀರ್ತಿ ತರಬೇಕು, ಎಂಬ ಹಿತವಚನಗಳೊಂದಿಗೆ ಸರ್ವರಿಗೂ ಶುಭಾಶೀರ್ವದಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾದ ಕುವೆಂಪು ವಿಶ್ವವಿದ್ಯಾಲಯದ ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊಫೆಸರ್. ಬಿ. ಇ. ಕುಮಾರ ಸ್ವಾಮಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಯು ಪ್ರಾಥಮಿಕ ಹಂತದಲ್ಲಿ ಪಡೆಯುವ ಶಿಕ್ಷಣದ ಹಾಗೂ ಶಿಕ್ಷಕರ ಮಹತ್ವವನ್ನು ವಿವರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ & ಪಿ. ಯು. ಕಾಲೇಜ್‌ನ ಸಾಧನೆಯನ್ನು ಪ್ರಶಂಸಿಸುತ್ತಾ ಮುಂದೆ ಈ ಸಂಸ್ಥೆ ವಿಶ್ವವಿದ್ಯಾಲಯದ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾದ ಪ್ರೊಫೆಸರ್. ಬಿ. ಇ. ಕುಮಾರ ಸ್ವಾಮಿಯವರನ್ನು ಸನ್ಮಾನಿಸಲಾಯಿತು. ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಈ ಸುಂದರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರೂಪಿಸಿ ನಿರ್ವಹಿಸಿದ್ದು ವಿಶೇಷವಾಗಿತ್ತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪೋಷಕವೃಂದ, ಕ್ಷೇತ್ರದ ಭಕ್ತವೃಂದ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಹಾಜರಿದ್ದು ಕಾರ್ಯಕ್ರಮದ ಮೆರುಗನ್ನು ಇಮ್ಮಡಿಯಾಗಿಸಿದರು.

300x250 AD

ಈ ಶೈಕಣಿಕ ವರ್ಷದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸುವುದರ ಜೊತೆಗೆ, ಹಿಂದಿನ ಶೈಕ್ಷಣಿಕ ವರ್ಷದ ೧೦ ನೇ ತರಗತಿಯ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆತೋರಿ ೧೦೦ ಪ್ರತಿಶತ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ಇದೇ ಸಮಯದಲ್ಲಿ ಪಾಲಕರ ಕ್ರೀಡಾಕೂಟದಲ್ಲಿ ವಿಜೇತರಾದ ಪಾಲಕರಿಗೆ ಬಹುಮಾನ ವಿತರಣೆ ನಡೆಯಿತು.

ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅರ್ಪಿತಾ ಮಾರುತಿ ಗುರೂಜಿ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಮಂಜುನಾಥ ಎಮ್. ಎನ್, ಶಾಲೆಯ ಆಡಳಿತ ನಿರ್ದೇಶಕ ಜಿ. ಟಿ. ಹೆಗಡೆ, ಪಾಲಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ವಿನಾಯಕ ನಾಯ್ಕ, ಪಾಲಕ-ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಹೆಗಡೆ, ಶಾಲೆಯ ಪ್ರಾಂಶುಪಾಲರಾದ ಎಸ್. ಜೊನ್ ಬೊಸ್ಕೊ ಹಾಜರಿದ್ದರು.

Share This
300x250 AD
300x250 AD
300x250 AD
Back to top