ಕಾರವಾರ: ಹೊರಗುತ್ತಿಗೆ ಇಂಜಿನಿಯರ್‌ಗಳಿಗೆ 8 ತಿಂಗಳಿನಿಂದ ವೇತನವಾಗದೇ ತೊಂದರೆ ಉಂಟಾಗಿದ್ದು, ಕೂಡಲೇ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಇಂಜಿನಿಯರ್‌ಗಳು ಜಿಲ್ಲಾಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಆರ್.ಡಿ.ಎ. ಅಧೀನದಲ್ಲಿ ಬರುವ ಪಿಎಂಜಿಎಸ್‌ವಾಯ್ ಕಾರವಾರ ಉಪ ವಿಭಾಗದ ಹೊರಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್ (ಬಿಇ), ಇಂಜಿನಿಯರ್(ಡಿಪ್ಲೋಮಾ), ಡಿಇಒ, ಪ್ಯೂನ್ ಆಗಿ ಕಾರ್ಯನಿರ್ವಹಿಸುತ್ತೀದ್ದೇವೆ. ಆದರೆ ಕಳೆದ ಎಪ್ರಿಲ್ 2023 ತಿಂಗಳಿಂದ ಈವರೆಗೂ ವೇತನ ಪಾವತಿಯಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಕಾರ್ಯ ನಿರ್ವಾಹಕ ಇಂಜಿನೀಯರ್‌ಗೆ ಪತ್ರದ ಮುಖಾಂತರ ವಿನಂತಿಸಿಕೊಂಡಿದ್ದರೂ ಕೂಡ ಇದುವರೆಗೂ ಸಹ ವೇತನ ಪಾವತಿ ಮಾಡುವ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ನಮ್ಮ ದಿನನಿತ್ಯದ ಜೀವನ ನಡೆಸಲು ತುಂಬಾ ಕಷ್ಟಕರವಾಗಿದೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
ಕುಟುಂಬಗಳಿಗೆ ನಾವೇ ಆಧಾರಸ್ತಂಭವಾಗಿರುವುದರಿಂದ ನಮ್ಮ ದಿನನಿತ್ಯದ ಗೃಹಬಳಕೆಯ ಖರ್ಚು, ಸಾಲದ ಸಮಸ್ಯೆ, ಅನಾರೋಗ್ಯ, ಮಕ್ಕಳ ವಿದ್ಯಾಭ್ಯಾಸ, ವಯೋವೃದ್ಧ ತಂದೆ ತಾಯಿಯ ಉಪಚಾರ ಹಾಗೂ ಇನ್ನಿತರ ವೈಯಕ್ತಿಕ ಸಮಸ್ಯೆಗಳ ಜವಾಬ್ದಾರಿ ಇರುವುದರಿಂದ ಜೀವನ ನಡೆಸಲು ಕಷ್ಟಸಾಧ್ಯವಾಗಿರುತ್ತದೆ. ಕಚೇರಿಗೆ ಓಡಾಟ ನಡೆಸಲು ಅಗತ್ಯವಾದ ಖರ್ಚು ಕೂಡ ಹೊಂದಿಸುವುದು ಸಾಧ್ಯವಾಗುತ್ತಿಲ್ಲ. ಕಾರಣ ಈಗ ನಮಗೆ ದಿನನಿತ್ಯ ಕಛೇರಿಗೆ ಬಂದು ಕರ್ತವ್ಯ ನಿಭಾಯಿಸಲು ಕಷ್ಟಸಾಧ್ಯವಾಗಿರುತ್ತದೆ. ಆದ್ದರಿಂದ ಆದಷ್ಟು ಬೇಗ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಿಸಬೇಕು ಎಂದು ವಿನಂತಿಸಿದರು.
ಈ ವೇಳೆ ಶರದ್ ದುರ್ಗೇಕರ, ರಾಜೇಶ ನಾಯ್ಕ, ಕಮಲಾಕರ ಗುನಗ, ಅಭಿಷೇಕ ಗುನಗ, ನಿಶ್ಚಿತ್ ನಾಯಕ, ರೋಶನ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.