ಹೊನ್ನಾವರ: ತ್ಯಾಗ ಮತ್ತು ಬಲಿದಾನಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಇಂತಹ ನೂರಾರು ವರ್ಷಗಳ ಭವ್ಯ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಅಳಿಸಲು ಮೋದಿ ಹತ್ತು ಜನ್ಮ ಹುಟ್ಟಿ ಬಂದರು ಸಾಧ್ಯವಿಲ್ಲದ ಮಾತಾಗಿದ್ದೂ, ಕಾಂಗ್ರೆಸ್ ಮುಕ್ತ ಭಾರತ ಅನ್ನುವ ದೇಶದ ಪ್ರಧಾನಿ ಮೋದಿಯ ಕನಸು ಕನಸಾಗಿಯೇ ಉಳಿಯಲಿದೆ ಎಂದು ಖ್ಯಾತ ಸಾಹಿತಿ ಡಾ. ಎಸ್.ಡಿ.ಹೆಗಡೆ ನುಡಿದರು.
ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ೧೩೯ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಂತರ, ಸೇರಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇವಲ ೭೫ ಸದಸ್ಯರಿಂದ ಎ.ಓ.ಹ್ಯೂಮ್ ಅಧ್ಯಕ್ಷತೆಯಲ್ಲಿ ೧೮೮೫ ಸ್ಥಾಪಿತವಾದ ಕಾಂಗ್ರೆಸ್ ಇಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತ್ರತ್ವದಲ್ಲಿ ಕೋಟ್ಯಾಂತರ ಸದಸ್ಯರನ್ನು ಹೊಂದಿದ್ದು, ದೇಶದ ಬಡವರ ಪಾಲಿಗೆ ಬೆಳಕಾಗಿ ನಿಂತಿದೆ ಎಂದರು. ಕಾಂಗ್ರೆಸ್ ಹುಟ್ಟಿದ್ದೇ ಸ್ಥಾಪಿತ ಶಕ್ತಿಗಳ ವಿರುದ್ಧ ಹೋರಾಡಲು ಎನ್ನುವ ಸತ್ಯ ಜಗತ್ತಿಗೆ ಗೊತ್ತಿದೆ. ಬ್ರಿಟಿಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಕಾಂಗ್ರೆಸ್ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಂತಿದೆ ಎಂದರು. ಸ್ವಾತಂತ್ರ್ಯ ನಂತರ ದೇಶದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ನೇತ್ರತ್ವದಲ್ಲಿ ಹಸಿರು ಕ್ರಾಂತಿಯ ಮೂಲಕ,ದೇಶವನ್ನು ಹಸಿವು ಮುಕ್ತ ಭಾರತ ಮಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಹೆಮ್ಮೆಯಿಂದ ನುಡಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,೧೩೯ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಆಚರಿಸಲು ನಮಗೆಲ್ಲಾ ಹೆಮ್ಮೆಯಾಗುತ್ತಿದ್ದು, ಇಂತಹ ಪಕ್ಷದಲ್ಲಿ ಕಾರ್ಯಕರ್ತನಾಗಿ ಬಡವರ ಸೇವೆ ಮಾಡಲು ಸಂತೋಷವಾಗುತ್ತಿದೆ ಎಂದರು. ಇಂದು ಭಾರತ ಪ್ರಪಂಚದ ಮುಂದುವರಿದ ರಾಷ್ರದ ಸಾಲಿನಲ್ಲಿ ಬಂದು ನಿಂತಿದ್ದರೇ ಅದು ಕಾಂಗ್ರೆಸ್ ಪಕ್ಷದ ನಾಯಕರ ಕೊಡುಗೆ ಎಂದರು. ಸೂರ್ಯ-ಚಂದ್ರ ಇರುವವರೆಗೂ ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲಾ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ ಮಾತನಾಡಿ ದೇಶದ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಕಾಂಗ್ರೆಸ್ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.ಇವತ್ತು ದೇಶದ ದುರ್ಬಲ ವರ್ಗದವರು ಮತ್ತು ಸಮಾಜದ ಎಲ್ಲಾ ವರ್ಗದ ಬಡವರು ಎರಡು ಹೊತ್ತು ಊಟ ಮಾಡುತ್ತಿದ್ದರೇ ಅದು ಕಾಂಗ್ರೆಸ್ ಜಾರಿಗೆ ತಂದ ಉಳುವವನೇ ಹೊಲದ ಒಡೆಯ ಅನ್ನುವ ಕಾನೂನಿನ ಮೂಲಕ ಎಂದರು.
ಹೊನ್ನಾವರ ಬಿಸಿಸಿ ಸೇವಾದಳದ ಅಧ್ಯಕ್ಷ ಮೋಹನ ಆಚಾರಿ ಮಾತನಾಡಿ ಸಮಾಜದ ಎಲ್ಲಾ ವರ್ಗದವರನ್ನು ಸಮನಾಗಿ ಕೊಂಡೊಯ್ಯುವ ಶಕ್ತಿ ಇರುವುದೇ ಕಾಂಗ್ರೆಸ್ ಸಿದ್ದಾಂತದಲ್ಲಿ ಎಂದರು. ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಲಕ್ಷ್ಮಿ ಗೊಂಡಾ, ಶ್ರೀಮತಿ ಆಶಾ ಮಡಿವಾಳ, ಸುರೇಶ ಮೇಸ್ತಾ, ಕೆ.ಎಮ್. ನಾಯ್ಕ, ಶ್ರೀಕಾಂತ್ ಮೇಸ್ತ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ ನಡೆಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಚಂದ್ರ ನಾಯ್ಕ, ಇಂಟೆಕ್ ಕಾರ್ಯದರ್ಶಿ ಕೇಶವ ಮೇಸ್ತ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯ್ಯ ಶೇಖ, ಇಂಟೆಕ್ ಅಧ್ಯಕ್ಷ ಆಗ್ನೆಲ್ ಡಯಾಸ ಉಪಸ್ಥಿತರಿದ್ದರು.
ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ ವಂದಿಸಿದರು.