ಯಲ್ಲಾಪುರ: ರಾಮಾಯಣ ಅನೇಕರಿಂದ ಬರೆಯಲ್ಪಟ್ಟಿದೆ. ಕನ್ನಡದಲ್ಲೇ ಮೂನ್ನೂರಕ್ಕೂ ಹೆಚ್ಚು ಬಗೆಯ ರಾಮಾಯಣವಿದೆ. ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿಯೂ ಇವೆ. ನನಗೆ ವಾಲ್ಮೀಕಿ ರಾಮಾಯಣ ಓದಿದಾಗ ಕನ್ನಡ ಮಣ್ಣಿಗೂ ರಾಮನ ಕಥೆಗೂ ಇರುವ ಸಂಬ0ಧದ ಬಗ್ಗೆ ವಿಶೇಷ ಆಸಕ್ತಿ ಉಂಟಾಗಿ ರಸ ರಾಮಾಯಣವನ್ನು ರಚಿಸಿದೆ ಎಂದು ಡಾ. ಗಜಾನನ ಹೆಗಡೆ (ಕಪ್ಪೆಕೆರೆ)ಮೈಸೂರು ಹೇಳಿದರು.
ಅವರು ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ “ರಸ ರಾಮಾಯಣ” ಕಾರ್ಯಕ್ರಮದಲ್ಲಿ ಸುದರ್ಶನ ಸೇವಾ ಪ್ರತಿಷ್ಠಾನದ ವತಿಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ರಾಮಾಯಣದ ಓದಿನ ತರುವಾಯದ ಅನುಭೂತಿ ನನ್ನಿಂದ ಈ ಕೃತಿ ಹೊರಹೊಮ್ಮುವಂತೆ ಮಾಡಿದೆ. ಕಲಾವಿದರೆಲ್ಲ ಇದನ್ನು ಆಧರಿಸಿ “ರಸ ರಾಮಾಯಣ” ಗಾಯನ, ನರ್ತನ, ಚಿತ್ರಣ, ವ್ಯಾಖ್ಯಾನದಂತಹ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಪ್ರದರ್ಶಿಸಿರುವುದು ನನಗೆ ಅತ್ಯಂತ ಪುನೀತ ಭಾವವನ್ನುಂಟು ಮಾಡಿದೆ. ನೀವು ನೀಡಿದ ಸನ್ಮಾನವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ದಂಪತಿಗಳು ಡಾ. ಗಜಾನನ ಹೆಗಡೆ ದಂಪತಿಗಳನ್ನು ಸನ್ಮಾನಿಸಿದರು. ಡಾ. ಬಸವರಾಜ ಶಿವಮೊಗ್ಗ ಇವರು ರಸ ರಾಮಾಯಣ ಕೃತಿಯನ್ನು ಸಭಿಕರಿಗೆ ಪರಿಚಯಿಸಿ ಮಾತನಾಡಿ, ರಸ ರಾಮಾಯಣ ಕರ್ತೃವನ್ನು ಸಮಾಜ ಇನ್ನಷ್ಟು ಗಮನಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಕಲಾವಿದರಾದ ಸುಬ್ರಾಯ ಭಾಗವತ ಕಪ್ಪೆಕೆರೆ, ಮಂಜುನಾಥ ಕಂಚನಮನೆಯವರಿAದ ಯಕ್ಷಧ್ವನಿ, ನಿರ್ಮಲಾ ಗೋಳಿಕೊಪ್ಪ ಇವರಿಂದ ಭಾವಾಭಿನಯ, ಶಿವರಾಮ ಭಾಗ್ವತ ಕನಕನಳ್ಳಿ , ಎನ್.ಜಿ. ಹೆಗಡೆ ಕಪ್ಪೆಕೇರಿಯವರಿಂದ ಭಾವಧ್ವನಿ, ಸತೀಶ್ ಯಲ್ಲಾಪುರ ಇವರಿಂದ ಚಿತ್ರಾಭಿವ್ಯಕ್ತಿ, ಡಾ. ಡಿ. ಕೆ. ಗಾಂವ್ಕರರಿAದ ವ್ಯಾಖ್ಯಾನಗಳ ಮೂಲಕ ರಸ ರಾಮಾಯಣದ ಪ್ರಸ್ತುತಿ ನಡೆಯಿತು. ಶಿಕ್ಷಕ ಸದಾನಂದ ದಬಗಾರ ಸ್ವಾಗತಿಸಿದರು. ಸತೀಶ ಯಲ್ಲಾಪುರ ವಂದಿಸಿದರು.