Slide
Slide
Slide
previous arrow
next arrow

ಆಡಂಬರ ಜೀವನಕ್ಕೆ ಬಲಿಯಾಗದೆ ಇದ್ದುದರಲ್ಲೇ ತೃಪ್ತಿಪಟ್ಟರೆ ಜೀವನ ಸುಲಭ ಸಾಧ್ಯ: ಭಾಸ್ಕರ್ ನಾಯ್ಕ್

300x250 AD

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ ಸಿ ಟ್ರಸ್ಟ್ (ರಿ ) ಭಟ್ಕಳ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಸರ್ಪನಕಟ್ಟೆ ವಲಯ, ಪ್ರಗತಿಬಂಧು, ಸ್ವ – ಸಹಾಯ ಸಂಘಗಳ ಒಕ್ಕೂಟ ಸರ್ಪನಕಟ್ಟೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸೋಡಿಗದ್ದೆ ಶ್ರೀ ಮಹಾಸತಿ ಅನ್ನಛತ್ರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉ.ಕ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಇವರು ಮಾತನಾಡಿ ಗ್ರಾಮಭಿವೃದ್ಧಿ ಯೋಜನೆಯ ಸಮಾಜ ಮುಖಿ ಕಾರ್ಯಕ್ರಮದ ಬಗ್ಗೆ ತಿಳಿಸಿ ಸದಸ್ಯರು ಸಂಘ ಸೇರಿದಮೇಲೆ ಆದ ಬದಲಾವಣೆಯ ಬಗ್ಗೆ ತಿಳಿಸಿದರು. ಮಾಶಾಸನ , ಸುಜ್ಞಾನನಿಧಿ ಜನಮಂಗಳ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಆಡು ಮುಟ್ಟದ ಸೊಪ್ಪಿಲ್ಲ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಇಲ್ಲದ ಕಾರ್ಯಕ್ರಮಗಳಿಲ್ಲ ಎಂಬ ಬಗ್ಗೆ ತಿಳಿಸಿದರು.
ಭಟ್ಕಳ ತಾಲೂಕಿನ ಯೋಜನಾಧಿಕಾರಿಯವರಾದ ಗಣೇಶ್ ನಾಯ್ಕ್ ಇವರು ಸ್ವಾಗತ ಹಾಗು ಪ್ರಾಸ್ತಾವಿಕ ಮಾತಿನೊಂದಿಗೆ ಸದಸ್ಯರಿಗೆ ಬಡ್ಡಿ ಲೆಕ್ಕಾಚಾರದ ಬಗ್ಗೆ ಮನದಟ್ಟಾಗುವಂತೆ ಮಾಹಿತಿಯನ್ನು ನೀಡಿದರು. ಸೋಡಿಗದ್ದೆ ಮಹಾಸತಿ ದೇವಸ್ಥಾನದ ಅಧ್ಯಕ್ಷರಾದ ಭಾಸ್ಕರ ಮೊಗೇರ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಮಾತ್ರ ಜನರಲ್ಲಿ ಧಾರ್ಮಿಕ ಭಾವನೆ ಮೂಡಲು ಸಾಧ್ಯ ಎಂಬುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸತ್ಯಸಾಹಿ ಸಮಿತಿಯ ಭಾಸ್ಕರ ನಾಯ್ಕ ಇವರು ಧಾರ್ಮಿಕ ಉಪನ್ಯಾಸ ನೀಡಿದರು. ಜನರು ಆಡಂಬರ ಜೀವನಕ್ಕೆ ಬಲಿಯಾಗದೆ ಇದ್ದುದರಲ್ಲಿಯೇ ತೃಪ್ತಿ ಹೊಂದಿದಾಗ ಮಾತ್ರ ಜೀವನ ಸುಲಭಸಾಧ್ಯವಾಗುತ್ತದೆ. ಮಕ್ಕಳಲ್ಲಿ ಈಗಿನಿಂದಲೇ ಧಾರ್ಮಿಕ ಪ್ರಜ್ಞೆ ಮೂಡಿಸಿದಾಗ ಮಾತ್ರ ಮುಂದಿನ ಜನಾಂಗಕ್ಕೆ ಇದು ಉಳಿಯುತ್ತದೆ ಎಂಬ ಬಗ್ಗೆ ಧಾರ್ಮಿಕ ಪ್ರವಚನ ನೀಡಿದರು.

ಸರ್ಪನಕಟ್ಟೆ ವಲಯದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ದಿನೇಶ್ ಮಂಜುನಾಥ್ ನಾಯ್ಕ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

300x250 AD

ವೇದಿಕೆಯಲ್ಲಿ ಮಾದೇವ ಗೋವಿಂದ ನಾಯ್ಕ ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಬೆಳಕೆ, ಯಲ್ವಡಿಕವೂರು ಗ್ರಾ.ಪಂ. ಅಧ್ಯಕ್ಷರಾದ ಪಾರ್ವತಿ ಗೊಂಡ, ಸೋಡಿಗದ್ದೆ ಮಹಾಸತಿ ದೇವಸ್ಥಾನದ ಉಪಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ನಾಯ್ಕ, ನಿವೃತ್ತ ಮುಖ್ಯ ಉಪಾದ್ಯಾಯರಾದ ಈರಪ್ಪ ನಾಯ್ಕ ಹಾಗೂ ಪೂಜಾ ಸಮಿತಿಯ ಉಪಾಧ್ಯಕ್ಷರಾದ ಪಾಂಡುರಂಗ ನಾಯ್ಕ , ಸಮಾಜ ಸೇವಕರಾದ ಅಣ್ಣಪ್ಪನಾಯ್ಕ ರವರು ಉಪಸ್ಥಿತರಿದ್ದರು.

ಇದರ ಮಧ್ಯೆ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ನಿಕಟಪೂರ್ವ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ತಾಂಬೂಲ ನೀಡುವ ಮೂಲಕ ಜವಾಬ್ದಾರಿ ಹಸ್ತಾಂತರಿಸಿದರು.
ಈ ಎಲ್ಲ ಕಾರ್ಯಕ್ರಮ ಮುಗಿದ ಬಳಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಕೂಡ ನಡೆಯಿತು. ಬಳಿಕ ಸ್ವಸಹಾಯ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ನೃತ್ಯ, ಕುಣಿತ ಭಜನೆ ಭಕ್ತಿಗೀತೆ, ಜನಪದನೃತ್ಯ, ಜನಪದ ಹಾಡು, ಶೋಬಾನೆ ಹಾಡು ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಇದಕ್ಕೂ ಮೊದಲು ಮುಂಜಾನೆಯಿಂದಲೇ ಸೋಡಿಗದ್ದೆ ಮಾರುತಿ ದೇವಸ್ಥಾನದ ಅರ್ಚಕರ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ನೂರಕ್ಕೂ ಅಧಿಕ ದಂಪತಿಗಳು ಸಂಕಲ್ಪದಲ್ಲಿ ಪಾಲ್ಗೊಂಡರು.
ವಲಯದ ಮೇಲ್ವಿಚಾರಕರಾದ ಶ್ರೀ ಪ್ರಭಾಕರರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮನೋರಮಾ ಮತ್ತು ಪೂರ್ಣಿಮಾ ಇವರು ಪ್ರಾರ್ಥನೆ ಹಾಡಿದರು, ಸೇವಾಪ್ರತಿನಿಧಿ ಆರತಿ ಆಚಾರ್ಯ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸದಸ್ಯರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಜರಿದ್ದರು.

Share This
300x250 AD
300x250 AD
300x250 AD
Back to top