ಜೊಯಿಡಾ : ಕ್ರೀಡೆಗಳು ಜೀವನದ ಭಾಗವಾಗಬೇಕು. ಕ್ರೀಡೆ ಪ್ರೀತಿಯ ಜೊತೆ ಪರಸ್ಪರ ಶಾಂತಿ ಸೌಹಾರ್ದತೆಯನ್ನು ಸದೃಢಗೊಳಿಸುತ್ತದೆ ಎಂದು ಗಣಪತಿ ಮುದ್ದೆಪಾಲ ಅವರು ಹೇಳಿದರು.
ಅವರು ಜೋಯಿಡಾ ತಾಲೂಕಿನ ಮೂಲ ಸೌಕರ್ಯ ವಂಚಿತ ಶಿವಪುರ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಒತ್ತಡದ ಬದುಕಿನಲ್ಲಿ ಕ್ರೀಡೆಗಳು ದೂರವಾಗುತ್ತಿರುವ ಸಂದರ್ಭದಲ್ಲಿ ನಮ್ಮನ್ನು ಈ ಪಂದ್ಯಾವಳಿ ಒಗ್ಗೂಡಿಸಿವೆ. ಅಲ್ಲದೆ ಉಳವಿ ಗ್ರಾಪಂ ದ ಶಿವಪುರದಲ್ಲಿ ಯಾವ ಸೌಕರ್ಯವು ಇಲ್ಲದ ಸ್ಥಿತಿಯಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಶಿವಪುರದ ಸಾಮಾಜಿಕ ಕಾರ್ಯಕರ್ತ ಗೋಪಾಲ ಭಟ್ಟ ಮಾತನಾಡಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಕ್ರೀಡಾಪಟುಗಳು ಭಾಗವಹಿಸುವಂತೆ ಕರೆ ನೀಡಿದರು.
ಜೊಯಿಡಾ ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಅವರು ಅತಿಥಿಯಾಗಿ ಪಾಲ್ಗೊಂಡು ಕ್ರೀಡೆ ಉತ್ತಮ ಆರೋಗ್ಯ ಹಾಗೂ ಉತ್ತಮ ಸಂಬಂಧ ಬೆಳೆಸಲು ಸಹಕಾರಿ ಎಂದರು.
ಪ್ರಮುಖರಾದ ಗ್ರಾಪಂ ಸದಸ್ಯ ದಾಮೋದರ ಗೌಡ, ಬೇಳ್ಳಣ್ಣ ಗೌಡ, ಶಂಕರ ಪಟಗಾರ, ವಿಶ್ವೇಶ್ವರ ಮಿರಾಶಿ ಇತರರು ಭಾಗವಹಿಸಿದ್ದರು. ತಿಮ್ಮಯ್ಯ ಮಿರಾಶಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.