ಮುಂಡಗೋಡ :ಇಟ್ಟಿಗೆ ತಯಾರು ಮಾಡುವ ಕೆಲಸದಲ್ಲಿ ತಾಯಿ ನಿರತವಾಗಿದ್ದಾಗ, ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗು, ಇಟ್ಟಿಗೆ ತಯಾರಿಕೆಗೆ ಶೇಖರಿಸಲು ಇಟ್ಟ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಜರುಗಿದೆ.
ಇಂದೂರ ಗ್ರಾಮದ ಮಾನ್ವಿತ ಮಲ್ಲಿಕಾರ್ಜುನ ಹೊಸೂರ ಎಂಬ ಮೂರು ವರ್ಷದ ಮಗು ದುರಂತ ಸಾವು ಕಂಡಿದೆ. ತಾಯಿಯು ಇಟ್ಟಿಗೆ ಕೆಲಸಕ್ಕೆ ಹೋದಾಗ, ಜೊತೆಯಲ್ಲಿ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ತನ್ನ ಕೆಲಸದಲ್ಲಿ ತಾಯಿ ನಿರತರಾಗಿದ್ದಾಗ, ಮಗು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾಳೆ. ಕೂಡಲೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರಲಾಗಿದೆ. ಅಷ್ಟರಲ್ಲಿ ಮಗು ಉಸಿರು ಚೆಲ್ಲಿದೆ ಎನ್ನಲಾಗಿದೆ.
ಆದರೂ, ಆಸ್ಪತ್ರೆಯ ಸಿಬ್ಬಂದಿ ಮಗುವನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳಿಸಿಕೊಟ್ಟಿದ್ದಾರೆ. ಸತ್ತ ಮಗುವನ್ನು ಹುಬ್ಬಳ್ಳಿ ಕಿಮ್ಸ್ ಗೆ ಒಯ್ದಿರುವ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಇಟ್ಟಿಗೆ ಭಟ್ಟಿ ಮಾಲಿಕ ತನಗೆ ಏನೂ ಸಂಬಂಧ ಇಲ್ಲದಂತೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡು ಅನಧಿಕೃತ ಪರವಾನಿಗೆ ಇಲ್ಲದ ಇಟ್ಟಿಗೆ ಭಟ್ಟಿಯನ್ನು ತಯಾರಿಸುತ್ತಿರುವ ಮಾಲೀಕ ಹಾಗೂ ಕೃಷಿಗೆ ಬಳಕೆ ಮಾಡಬೇಕಾದ ವ್ಯವಸಾಯದ ಜಮೀನನ್ನು ಭಟ್ಟಿ ಮಾಡಲು ಬಾಡಿಗೆ ನೀಡಿದ ಗದ್ದೆಯ ಮಾಲೀಕನ ಮೇಲೆ ಕ್ರಮ ಯಾವ ಕ್ರಮ ಕೈಗೊಳ್ಳುತ್ತಾರೆ ಹಾಗೂ ಮೃತಪಟ್ಟ ಮಗುವಿನ ತಾಯಿಗೆ ಯಾವ ರೀತಿ ನ್ಯಾಯ ಒದಗಿಸುತ್ತಾರೆ ಕಾದು ನೋಡಬೇಕಾಗಿದೆ.