ಶಿರಸಿ: ತಾಲೂಕಿನ ಗೌಡಳ್ಳಿಯ ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಚಂದನ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಹಾಗೂ ಪ್ರೋತ್ಸಾಹಕ್ಕಾಗಿ ವಿಜ್ಞಾನ ಹಾಗೂ ವಾಣಿಜ್ಯ ವಸ್ತು ಪ್ರದರ್ಶನ ಸಂಘಟಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿಯ ಪ್ರತಿಭೆಯನ್ನು ಅತ್ಯಂತ ಉತ್ಸಾಹದಿಂದ ಮುಂದಿನ ದಿನಗಳಲ್ಲಿ ತಾವೂ ಕೂಡ ವಿಜ್ಞಾನಿಗಳಾಗಿ ರಾಜ್ಯ, ದೇಶದ ಕೀರ್ತಿ ಹೆಚ್ಚಿಸಬಲ್ಲೆವು ಎನ್ನುವಷ್ಟರ ಮಟ್ಟಿಗೆ ಪ್ರದರ್ಶನ, ಮಾಹಿತಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಹತ್ತಾರು ಬಗೆಯ ವೈಜ್ಞಾನಿಕ ವಸ್ತುಗಳನ್ನು ತಾವೇ ತಯಾರಿಸಿ, ಅದರಿಂದ ಸಮಾಜಕ್ಕೆ ಆಗಬಹುದಾದ ಅನುಕೂಲತೆ ಮತ್ತು ಪ್ರಸ್ತುತವಾಗಿ ಅವಶ್ಯವಾಗಿ ಬೇಕಾದ ಆಧುನಿಕರಣದಲ್ಲಿ ಹೇಗೆ ಉಪಯೋಗಿಸಬದು ಎಂದು ವಿದ್ಯಾರ್ಥಿಗಳ ಮುಂದಾಲೋಚನೆ ನೋಡುಗರ ಮನ ಸೆಳೆದಿದೆ.
ವಿಜ್ಞಾನ ಮತ್ತು ವಾಣಿಜ್ಯ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ಅವರದ್ದೆ ಆದ ಪ್ರತಿಭೆ ಇರುತ್ತಿದ್ದು, ವಿದ್ಯಾರ್ಥಿ ಜೀವನ ಬಹಳ ಶ್ರೇಷ್ಠವಾದದ್ದಾಗಿದೆ. ಆ ಹಂತದಲ್ಲಿ ಅನುಭವಿ ಶಿಕ್ಷಕರ ಮಾರ್ಗದರ್ಶನ ಪಡೆದು ಕ್ರಿಯಾಶೀಲವಾಗಿ ಶಾಲಾ ಪಠ್ಯಕ್ರಮದೊಂದಿಗೆ ಮುಂದುವರೆದಾಗ ಜೀವನದ ಗುರಿ ಮುಟ್ಟಲು ಸಾಧ್ಯ ಎಂದರು.
ಶಾಲಾ ಕಾಲೇಜು ಹಂತದಲ್ಲಿ ಬೋಧಕ ವರ್ಗದವರ ಹಾಗೂ ಪಾಲಕರ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣವಾಗಿದ್ದು, ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಮ್ಮ ಅನುಭವದೊಂದಿಗೆ ವಿದ್ಯಾರ್ಥಿಗಳ ವಹಿಸಬೇಕಾದ ವೈಜ್ಞಾನಿಕ ಮನೋಭಾವದ ಬಗ್ಗೆ ಗಣೇಶನಗರ ಪ್ರೌಢಶಾಲೆಯ ಶಿಕ್ಷಕ ಹಾಗೂ ಭಾರತ್ ಕಾ ಗೌರವ ಪ್ರಶಸ್ತಿ ಪುರಸ್ಕೃತ ಕೆ.ಎಲ್.ಭಟ್ಟ ಮಾಹಿತಿ ನೀಡಿದರು.
ಚಂದನ ಪಿಯು ಕಾಲೇಜಿನ ಅಧ್ಯಕ್ಷ ವೆಂಕಟರಮಣ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಮಿಯಾರ್ಡ್ ಶಿರಸಿ ಅಧ್ಯಕ್ಷ ಎಸ್.ಆರ್. ಹೆಗಡೆ, ಚಂದನ ಪಿಯು ಕಾಲೇಜಿನ ಸಿಇಓ ಹಾಗೂ ಪ್ರಾದೇಶಕ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಸಿ.ಡಿ.ನಾಯ್ಕ,ಮಿಯಾರ್ಡ್ ಮತ್ತು ಚಂದನ ಕಾಲೇಜು ಸಂಸ್ಥಾಪಕ ಎಲ್.ಎಂ.ಹೆಗಡೆ, ಸದಸ್ಯ ವಿನಯ ಜೋಶಿ, ಪ್ರಾಚಾರ್ಯ ಆರ್.ಎಂ.ಭಟ್ಟ, ವಿದ್ಯಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಸತೀಶ ದೇವಾಡಿಗ ನಿರೂಪಿಸಿದರು. ಶಿಕ್ಷಕ ಗುರುವಿಘ್ನೇಶ ವಂದಿಸಿದರು. ಶಿರಸಿ ತಾಲೂಕಿನ ವಿವಿಧ ಭಾಗದ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಗಮಿಸಿ, ಚಂದನ ಕಾಲೇಜಿನ ವಸ್ತು ಪ್ರದರ್ಶನ ವೀಕ್ಷಿಸಿದ್ದು ವಿಶೇಷವಾಗಿತ್ತು.