ಸಿದ್ದಾಪುರ: ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅಭಿಮಾನವಿರಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಸಿಬಿಸಿಸಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಇಡೀ ನಾಡಿಗೆ ಬೆಳಕು ಚೆಲ್ಲುವ ಪ್ರತಿಭೆಗಳಾಗಿ ಬೆಳಗಬೇಕು. ಶೈಕ್ಷಣಿಕ ಜೀವನದ ಸದ್ಬಳಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು. ಪಿಯುಸಿ ಹಂತ ತುಂಬಾ ಮಹತ್ವದಾಗಿದ್ದು, ಶ್ರದ್ಧೆಯಿಂದ ಅಧ್ಯಯನ ನಡೆಸಬೇಕು. ಸವಾಲನ್ನು ಸ್ವೀಕರಿಸದಿದ್ದರೆ ತಾವಂದುಕೊಂಡ ಗುರಿ ತಲುಪಲು ಸಾಧ್ಯವಿಲ್ಲ. ಶಿಕ್ಷಣಕ್ಕೆ ಆದ್ಯತೆ ನೀಡಿ ಯಶಸ್ವಿ ಜೀವನ ನಡೆಸುವುದರ ಜತೆಗೆ ಯುವಜನತೆ ರಾಜಕೀಯ ಕ್ಷೇತ್ರದತ್ತ ಒಲವು ತೋರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ನರಹರಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ತ್ಯಾಗಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಶೋಧಾ ನಾಯ್ಕ, ಉಪಾಧ್ಯಕ್ಷ ವೆಂಕಟ್ರಮಣ ಹೆಗಡೆ, ತ್ಯಾಗಲಿ ಸೊಸೈಟಿ ಅಧ್ಯಕ್ಷ ಎನ್.ಬಿ.ಹೆಗಡೆ, ಸಿಬಿಸಿಯ ಉಪಾಧ್ಯಕ್ಷ ಮಹೇಶ ಹೆಗಡೆ, ಎಂಇಎಸ್ ಶಿಕ್ಷಣ ಸಂಸ್ಥೆಯ ಎಸ್.ಕೆ.ಭಾಗವತ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಜರಿದ್ದರು.
ಕಾಲೇಜಿನ ಉಪನ್ಯಾಸಕ ಎಂ.ಎಂ.ಭಟ್ ಸ್ವಾಗತಿಸಿದರು. ಕಾಲೇಜಿನ ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು.