ಕಾರವಾರ: ತಾಲೂಕಿನ ನಗೆ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಯ್ದ ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೈಗಾ ಯೋಜನೆಯ ಸ್ಥಳ ನಿರ್ದೇಶಕ ಪ್ರಮೋದ ರಾಯಚೂರು ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಅತ್ಯಂತ ರಮಣೀಯ ಸುಂದರ ಕುಗ್ರಾಮದ ಗ್ರಾಮಸ್ಥರಲ್ಲಿ ಅನೇಕ ಕಲೆಗಳು ಅಡಗಿವೆ. ಕಲಾಕೃತಿಗಳ ಸೌರಭವೇ ತಲೆಯೆತ್ತುವಂತೆ ಇಲ್ಲಿಯ ಮಕ್ಕಳನ್ನು ಎಷ್ಟು ಸ್ಮರಿಸಿದರೂ ಸಾಕಾಗುವುದಿಲ್ಲ. ಕೈಗಾ ಯೋಜನೆ ಗ್ರಾಮೀಣ ಮಕ್ಕಳ ಶಿಕ್ಷಣ ಆರೋಗ್ಯ ಅಭಿವೃದ್ಧಿ ದಿಶೆಯಲ್ಲಿ ದಾಪುಗಾಲು ಇಡಲು ನೀವುಗಳು ಸಹಕಾರಿಯಾಗಿದ್ದೀರಿ. ಇಂತಹ ಪ್ರದೇಶದಲ್ಲಿ ಕನ್ನಡ ಸಂಭ್ರಮ 50ರ ಗಾಳಿಪಟ ಸ್ಪರ್ಧೆ ಏರ್ಪಡಿಸಿದ ಸಂಘಟಕರಿಗೆ ಹಾಗೂ ಪಾಲ್ಗೊಂಡ ಎಲ್ಲ ಮುದ್ದು ಮಕ್ಕಳಿಗೆ ಧನ್ಯವಾದಗಳು. ನಿಮ್ಮೊಂದಿಗೆ ನಾವು ಸದಾ ಪರಿಸರದ ಜಾಗೃತಿ ಹಾಗೂ ಕಲೆಯ ಅಭಿವೃದ್ಧಿಗೆ ಒಲವು ಮೂಡಿಸಲು ಪ್ರಯತ್ನಿಸುತ್ತೇವೆ ಎಂದರು.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಮಾತನಾಡುತ್ತ, ಇಲ್ಲಿಯ ಜನ ಅರಣ್ಯ ರಕ್ಷಿಸಿ ಅರಣ್ಯವನ್ನು ಬೆಳೆಸಲು ಸಹಕರಿಸಿದ್ದಕ್ಕೆ ಕರ್ನಾಟಕ ಸರಕಾರ ನನಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದೆ. ತಾವೆಲ್ಲರೂ ಪರಿಸರದ ಜಾಗೃತಿ ಜೊತೆಯಲ್ಲಿ ಪರಿಸರ ಪ್ರೇಮಿಗಳಾಗಬೇಕು. ಅರಣ್ಯ ಬೆಳೆಸಿ ಪರಿಸರವನ್ನು ಉಳಿಸಿರಿ ಎಂದರು.
ಕೈಗಾ ಯೋಜನೆಯ ಸಿಎಸ್‌ಆರ್ ಸಮಿತಿಯ ಉಪಾಧ್ಯಕ್ಷ, ಎಡಿಶನಲ್ ಚೀಪ್ ಇಂಜಿನಿಯರ್ ಎಸ್. ತಿಪ್ಪೆಸ್ವಾಮಿ ಮಾತನಾಡುತ್ತ, ಸುಂದರವಾದ ರಮಣೀಯ ಕಾಡಿನಲ್ಲಿ ಈ ಗಾಳಿಪಟ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಿದ್ದು, ನಮಗೆಲ್ಲ ಮನೋಲ್ಲಾಸ ಉಂಟುಮಾಡಿದೆ. ನಾವುಗಳು ಶಾಲೆಗಳ ಅಭಿವೃದ್ಧಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ಪೂರ್ಣ ಕೈಹಸ್ತ ಚಾಚುವಿರಾಗಿ ಹೇಳಿದರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ನಾಯ್ಕ ಗ್ರಾಮ ಪಂಚಾಯಿತಿಗಳಲ್ಲಿ ಶಾಲೆಗಳ ಅಭಿವೃದ್ಧಿಗೆ ಮತ್ತು ಮಕ್ಕಳ ಶೈಕ್ಷಣಿಕ ಗುಣಮಟ್ಟ ಎತ್ತರಿಸಲು ಯೋಜನೆಗಳಿಗಾಗಿ ಸರಕಾರದಿಂದ ಹಣ ಬಿಡುಗಡೆಯಾಗುತ್ತಿದ್ದು, ಆ ಹಣವನ್ನು ಶಾಲಾ ಮಕ್ಕಳ ಅಭಿವೃದ್ಧಿಗೆ ಬಳಸಿಕೊಳ್ಳಿ ಎಂದು ತಿಳಿಸಿದರು.
ದೇವಳಮಕ್ಕಿ ಗ್ರಾ.ಪಂ ಅಧ್ಯಕ್ಷ ಸಂತೋಷ ಲೇಖಾ ಗೌಡ, ವೈಲವಾಡ ಗ್ರಾಪಂ ಅಧ್ಯಕ್ಷೆ ಮೇಘಾ ಮನೋಹರ ಗಾಂವಕರ, ಕೆರವಡಿ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಯಶ್ವಂತ ನಾಯ್ಕ, ನಗೆಯ ಗ್ರಾಮ ಅರಣ್ಯ ಸಮಿತಿಯ ರಾಮಾ ಗುರ್ಕ್ಯಾ ಗೌಡ, ಸತ್ಯಸಾಯಿ ಸತ್ವ ನಿಕೇತನಂ ಗಿರೀಶ ಎಚ್.ಎಸ್., ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ ನಾಯಕ, ವೈಲವಾಡಾ ಗ್ರಾ.ಪಂ. ಉಪಾಧ್ಯಕ್ಷ ರಾಜೇಂದ್ರ ಎಚ್. ರಾಣೆ, ಕೆರವಡಿ ಗ್ರಾ.ಪಂ ಉಪಾಧ್ಯಕ್ಷೆ ದೀಪಾ ದೇವಿದಾಸ ನಾಯ್ಕ, ದೇವಳಮಕ್ಕಿ ಗ್ರಾ.ಪಂ. ಉಪಾಧ್ಯಕ್ಷೆ ಕೋಮಲಾ ಕೆ. ದೇಸಾಯಿ, ಉದ್ಭವ ಲಿಂಗ ದೇವಸ್ಥಾನದ ಮೊಕ್ತೇಸರರ ಕುಟುಂಬದ ಆನಂದು ಗಾಂವಕರ, ಸಿಆರ್‌ಪಿ ಪ್ರಶಾಂತ ಸಾವಂತ, ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ದಿನೇಶ ಗೌಡ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಅಖ್ತರ ಜಾಫರ್ ಸೈಯದ್ ಸ್ವಾಗತ ಮಾಡಿದರು. ಆನಂದು ಎಸ್. ಘಟ್‌ಕಾಂಬ್ಳೆ ನಿರೂಪಿಸಿದರು. ಪ್ರಶಾಂತ ಸಾವಂತ, ಸಹಶಿಕ್ಷಕಿ ರೂಪಾ ಉಮೇಶ ನಾಯಕ ನಿರ್ವಹಿಸಿದರು. ಸಿಆರ್‌ಪಿ ಅಶೋಕ ಬಾಡಕರ ವಂದನಾರ್ಪಣೆ ಮಾಡಿದರು.