ಕಾರವಾರ: ಜೋಯಿಡಾ ತಾಲೂಕಿನ ಕ್ಯಾಸಲ್ ರಾಕ್ ಹೋಬಳಿಯ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸ್ಸುಳ್ಳಿ ಗ್ರಾಮಸ್ಥರು ಹಲವು ದಶಕಗಳಿಂದ ಎದುರಿಸುತ್ತಿದ್ದ ಪಡಿತರ ಪಡೆಯುವ ಕುರಿತ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಒಂದೇ ನಿಮಿಷದಲ್ಲಿ ಬಗೆಹರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಜನತಾ ದರ್ಶನ ಕಾರ್ಯಕ್ರಮದ ಉದ್ದೇಶ ಸಾಕಾರಗೊಳಿಸಿದರು.
ಮಂಗಳವಾರ ಜೋಯಿಡಾ ತಾಲೂಕಿನ ಕ್ಯಾಸಲ್ ರಾಕ್ ಹೋಬಳಿಯ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸ್ಸುಳ್ಳಿಯ ಗವಳಾದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ, ಗ್ರಾಮದಲ್ಲಿ ಪಡಿತರ ವಿತರಣೆ ಮಾಡುವ ಅಂಗಡಿ ಮಂಜೂರು ಮಾಡುವಂತೆ ಗ್ರಾಮಸ್ಥರು ಸಲ್ಲಿಸಿದ ಮನವಿ ಆಲಿಸಿದ ಜಿಲ್ಲಾಧಿಕಾರಿ ಕೂಡಲೇ ಈ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವ ಕುರಿತಂತೆ ನೋಟಿಫಿಕೇಶನ್ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಗ್ರಾಮದಲ್ಲಿ ಯಾವುದೇ ಸಹಕಾರ ಸಂಘ ಇಲ್ಲ, ಇಂಟರ್ನೆಟ್ ಸಂಪರ್ಕ ಇಲ್ಲವಾಗಿದ್ದು, ನ್ಯಾಯಬೆಲೆ ಅಂಗಡಿ ತೆರೆಯಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಉತ್ತರಿಸಿದರು.ಇದಕ್ಕೆ ಒಪ್ಪದ ಜಿಲ್ಲಾಧಿಕಾರಿಗಳು, ಸಹಕಾರ ಸಂಘಗಳು ಮಾತ್ರ ನ್ಯಾಯಬೆಲೆ ತೆರೆಯಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಸಹಕಾರ ಸಂಘಗಳು ಇಲ್ಲದ ಪ್ರದೇಶದಲ್ಲಿ ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸಹ ತೆರೆಯಬಹುದಾಗಿದೆ, ಅಗತ್ಯ ಇಂಟರ್ನೆಟ್ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಆದ್ದರಿಂದ ತಕ್ಷಣ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸುವಂತೆ ನಿರ್ದೇಶನ ನೀಡಿದರು.
ಸಂಪೂರ್ಣ ಕಾಡಿನಿಂದ ಆವೃತ್ತವಾಗಿದ್ದು, ಯಾವುದೇ ಬಸ್ ಸೌಲಭ್ಯ ಸಹ ಇಲ್ಲದ ಇಲ್ಲಿನ ಗ್ರಾಮಸ್ಥರು ಪ್ರತಿ ತಿಂಗಳು ಪಡಿತರ ಪಡೆಯಲು 30 ಕಿಮೀ ದೂರ ಕ್ರಮಿಸಬೇಕಿತ್ತು. ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸುವಾಗ ಇಲ್ಲಿನ ಗ್ರಾಮದ ರಸ್ತೆಯ ಸಂಪೂರ್ಣ ಚಿತ್ರಣ ಖುದ್ದು ಕಂಡಿದ್ದ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಸಮಸ್ಯೆಯನ್ನು ತಕ್ಷಣ ಅರಿತು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದರು.