ಶಿರಸಿ: ನಾಡಿನ ಪ್ರಸಿದ್ಧ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರಿಗೆ ಇಲ್ಲಿನ ಎಂ.ರಮೇಶ ಪ್ರಶಸ್ತಿ ಸಮಿತಿ ನೀಡುವ ರಾಜ್ಯಮಟ್ಟದ ಎಂ.ರಮೇಶ ಪ್ರಶಸ್ತಿ ಪ್ರಕಟಿಸಲಾಗಿದೆ.
ಈ ಮೊದಲು ಯಕ್ಷಗಾನ, ನಾಟಕ ಕ್ಷೇತ್ರದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಈ ಬಾರಿ ಸಾಹಿತ್ಯ ಕ್ಷೇತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಲು ಸಮಿತಿ ತೀರ್ಮಾನಿಸಿ, ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಸಮಿತಿಯ ಮುಖ್ಯಸ್ಥೆ ಡಾ. ವಿಜಯನಳಿನಿ ರಮೇಶ ತಿಳಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾಲಯದ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವಾ ನಿವೃತ್ತರಾದ ಭುವನೇಶ್ವರಿ ಹೆಗಡೆ ಅವರು ಮೂಲತಃ ಉತ್ತರ ಕನ್ನಡದವರಾಗಿದ್ದು, 500ಕ್ಕೂ ಅಧಿಕ ಹಾಸ್ಯ ಲೇಖನಗಳ ಮೂಲಕ ಮನೆ ಮಾತಾದವರು. ನಗೆ ಮುಗುಳು, ಎಂಥದ್ದು ಮಾರಾಯ್ರೆ, ಕೈಗುಣ ಬಾಯ್ಗುಣ, ಹಾಸ ಭಾಸ, ಬೆಟ್ಟದ ಭಾಗೀರಥಿ ಸೇರಿದಂತೆ ಅನೇಕ ಕೃತಿಗಳನ್ನೂ ಕೊಟ್ಟವರು. ಅನೇಕ ಕೃತಿಗಳು ಕಾಲೇಜು ಪಠ್ಯವಾಗಿಯೂ ಆಯ್ಕೆ ಆಗಿದೆ. ಅನೇಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿ ಮಬ್ಬೆ ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ಟಿ.ಸುನಂದಮ್ಮ ಪ್ರಶಸ್ತಿ, ಅವ್ವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಅಮೇರಿಕಾದ ಬಾಸ್ಟನ್ ಕನ್ನಡ ಕೂಟದ ರತ್ನ ಮಹೋತ್ಸವ ಉದ್ಘಾಟನೆ ಕೂಡ ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.
ಶಿರಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸುಮಾರು ಮೂರು ದಶಕಗಳ ಕಾಲ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕರಾಗಿ, ಜಿಲ್ಲೆಯಲ್ಲಿ ಹಾಸ್ಯ ಭಾಷಣಗಳಿಗೆ ಹೆಸರಾಗಿದ್ದ ಪ್ರೊ.ಎಂ.ರಮೇಶ ಅವರು 2020 ರಲ್ಲಿ ಕಾಲವಾದ ನಂತರ ಸಮಾನ ಆಸಕ್ತರ ಬಳಗ ಸಮಿತಿ ರಚಿಸಿಕೊಂಡು ಪ್ರಶಸ್ತಿ ಸ್ಥಾಪಿಸಲಾಗಿದೆ.
ಎಂ.ರಮೇಶ ಅವರ ನೆನಪಿನ ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ. ಇದನ್ನು ಡಿ.31ರಂದು ಸಂಜೆ 4ಕ್ಕೆ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರಣೇಂದ್ರ ಕುರಕುರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಿವೃತ್ತ ಪ್ರಾಚಾರ್ಯೆ ಡಾ.ಕುಮುದಾ ಶರ್ಮಾ ಅಧ್ಯಕ್ಷತೆವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.