ಯಲ್ಲಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಡಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂ.ಗಣಪತಿ ಭಟ್ಟ ಹಾಸಣಗಿ ಅವರನ್ನು ಹಾಸಣಗಿಯ ಅವರ ನಿವಾಸದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ತಾನ್ ಸೇನ್ ಸಮ್ಮಾನ್ ಪುರಸ್ಕಾರಕ್ಕೆ ಭಾಜನರಾದ ಹಿನ್ನೆಲೆಯಲ್ಲಿ ಪಂ.ಗಣಪತಿ ಭಟ್ಟ ಅವರನ್ನು ಕ.ಸಾ.ಪ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಪಂ.ಗಣಪತಿ ಭಟ್ಟ ಮಾತನಾಡಿ, ಮಧ್ಯಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ನನ್ನ ಸಂಗೀತ ಕಛೇರಿಗಳು ನಡೆದಿವೆ. ಮಧ್ಯಪ್ರದೇಶದ ಸರ್ಕಾರ ನನ್ನನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಬಂದಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಕ.ಸಾ.ಪ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಎಂಬ ಕಾರ್ಯಕ್ರಮದಡಿ, ಸಾಧಕರ ಮನೆಗೆ ಹೋಗಿ ಅವರನ್ನು ಗೌರವಿಸುವ, ಅಭಿನಂದಿಸುವ ಕಾರ್ಯ ಮಾಡುತ್ತಿದೆ ಎಂದರು.
ಕ.ಸಾ.ಪ ಸದಸ್ಯರಾದ ಶ್ರೀರಂಗ ಕಟ್ಟಿ, ಆರ್.ಎನ್.ಭಟ್ಟ ದುಂಡಿ, ನಾಗೇಂದ್ರ ಭಟ್ಟ ಕುಂಬಾರಕುಳಿ, ಸೂರ್ಯನಾರಾಯಣ ಭಟ್ಟ ಮಾಳಕೊಪ್ಪ, ಕೃಷ್ಣ ಭಟ್ಟ ನಾಯಕನಕೆರೆ, ಯಮುನಾ ನಾಯ್ಕ, ಯು.ಎಸ್.ಭಟ್ಟ, ವಿಶ್ವೇಶ್ವರ ಗಾಂವ್ಕಾರ್, ನಾಗರಾಜ ಮದ್ಗುಣ ಹಾಗೂ ಗ್ರಾಮಸ್ಥರು ಇದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ ನಿರ್ವಹಿಸಿದರು.