ಕಾರವಾರ: ಪ್ರಸಕ್ತ rಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ಪ್ರೌಢ ಶಾಲಾ ವಿದ್ಯಾರ್ಥಿ (6 ರಿಂದ 10 ನೇ ತರಗತಿ) ಗಳಿಗೆ ವಾರ್ಷಿಕ ರೂ. 10,000 ಗಳಂತೆ ಪ್ರೋತ್ಸಾಹ ಧನ ನೀಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿದಾರರು 2022-23 ನೇ ಸಾಲಿನ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ ಅಥವಾ ಪ್ರೌಢ ಶಾಲೆ (6 ರಿಂದ 10 ನೇ ತರಗತಿ) ಯಲ್ಲಿ ಓದುತ್ತಿರಬೇಕು. ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾಯಿತವಾದ ಕ್ರೀಡಾ ಸಂಸ್ಥೆಗಳು ದಿ: 1-4-2022 ರಿಂದ 31-3-2023 ರವರೆಗೆ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು. ಅಂದರೆ ದಿ: 1-4-2022 ರಿಂದ 31-3-2023 ರ ಅವಧಿಯಲ್ಲಿ ನಡೆದ ಕ್ರೀಡಾಕೂಟಗಳಲ್ಲಿನ ಸಾಧನೆಯನ್ನು ಮಾತ್ರ ಪರಿಗಣಿಸಲಾಗುವುದು. ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದ ಕ್ರೀಡಾಪಟುಗಳು, ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು, ಒಬ್ಬ ಕ್ರೀಡಾಪಟು ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ ಒಂದೇ ವಿದ್ಯಾರ್ಥಿವೇತನದ ಮೊತ್ತಕ್ಕೆ ಮಾತ್ರ ಅರ್ಹರಿರುತ್ತಾರೆ. ಈ ಸೌಲಭ್ಯ ಪಡೆಯಲು ಅರ್ಹರಿರುವ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿರಬೇಕು.
ಅರ್ಹ ಕ್ರೀಡಾಪಟುಗಳು ಜನವರಿ 10 ರೊಳಗಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾರವಾರ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸುಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ:08382-201824, 9480886551 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.