ಶಿರಸಿ: ಮಲೆನಾಡು ಮತ್ತು ಕರಾವಳಿ ಪ್ರದೇಶದ ಸಮಸ್ಯೆಗಳು ರಾಜ್ಯದ ಹಿಂದುಳಿದ ಪ್ರದೇಶಕ್ಕಿಂತ ವಿಭಿನ್ನವಾಗಿದ್ದು, ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಪಕ್ಷಾತೀತ, ಜಾತ್ಯಾತೀತ ನೆಲೆಯಲ್ಲಿ ಸಂಘಟಿತ, ಸಾಂಘಿಕ ಹೋರಾಟ ಅವಶ್ಯವೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಶನಿವಾರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಸ್ಮಾರಕ ಭವನದಲ್ಲಿ ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಆಶ್ರಯದಲ್ಲಿ ಜರುಗಿದ ನಾಯಕತ್ವ ಶಿಬಿರದಲ್ಲಿ ಮಾತನಾಡಿದರು.
ಈ ಪ್ರದೇಶದ ಕಂದಾಯ, ಅರಣ್ಯ ಭೂಮಿ, ಬೆಟ್ಟ, ಹಾಡಿ, ಕುಮ್ಮಟಿ ಮುಂತಾದ ಪ್ರದೇಶದ ಭೂಮಿ ಹಕ್ಕಿನ ಸಮಸ್ಯೆ, ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಿದ ಸೂಕ್ಷ್ಮ ಪ್ರದೇಶ, ಅಭಯಾರಣ್ಯ, ಸಿಂಘಳಿಕ ರಕ್ಷಿತ ಪ್ರದೇಶ, ಶರಾವತಿ ಮತ್ತು ಭದ್ರಾ ಅಭಯಾರಣ್ಯ ಜ್ಯಾರಿಯಿಂದ ಜನಜೀವನಕ್ಕೆ ಆಗುತ್ತಿರುವ ಸಮಸ್ಯೆಗಳ ಕುರಿತು ಕ್ರೋಢೀಕೃತ ಹೋರಾಟ ಅವಶ್ಯ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಜರುಗಿಸಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಸುಧೀರ್ ಮುರೊಳ್ಳಿ ಪ್ರಸ್ತಾವಿಕ ಮಾತನಾಡುತ್ತಾ ಮಲೆನಾಡು ಮತ್ತು ಕರಾವಳಿ ಭಾಗದ ಸಮಸ್ಯೆಗಳ ಕ್ರೋಢೀಕರಿಸಿ ಪರಿಹಾರಕ್ಕೆ ಸರಕಾರ ಮಟ್ಟದಲ್ಲಿ ಪರಿಣಾಮಕಾರಿಯಾದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಅನೀಲ್ ಹೊನ್ನಕೊಪ್ಪ ಚಿಕ್ಕಮಂಗಳೂರು, ಹಿರಿಯ ನ್ಯಾಯವಾದಿ ಮನೋರಾಜ್ ಮಂಗಳೂರು, ರೈತ ಮುಖಂಡ ದೇವರಾಜ, ಹಿರಿಯ ಚಿಂತಕರಾದ ಎಮ್.ಎಲ್ ಮೂರ್ತಿ ಹಾಗೂ ಹಿರಿಯ ಹೋರಾಟಗಾರ ಎಮ್.ಜಿ ಹೆಗಡೆ ಮಂಗಳೂರು ಮುಂತಾದವರು ಉಪಸ್ಥಿತರಿದ್ದರು.