ಸಿದ್ದಾಪುರ: ಆಧುನಿಕ ಶಿಕ್ಷಣದ ಕಾರಣದಿಂದ ಧರ್ಮ ಬಿಡಬಾರದು. ಧರ್ಮ,ಭಾಷೆ,ಹುಟ್ಟಿದ ನೆಲವನ್ನು ಮರೆಯಬಾರದು. ಎಲ್ಲೇ ಇದ್ದರೂ ಇವನ್ನು ಉಳಿಸಿಕೊಂಡರಬೇಕು. ಇಂಗ್ಲೀಷ್ ಭಾಷೆಯ ಅತಿ ವ್ಯಾವೋಹ ನಮ್ಮ ಭಾಷೆಯಿಂದ ದೂರ ಮಾಡುತ್ತದೆ ಎಂದು ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹೇಳಿದರು.
ಅವರು ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶ್ರೀ ಮಹಾಗಣಪತಿ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಸುವರ್ಣ ಸಂಭ್ರಮ ಸಮಾರಂಭದ ಸಮಾರೋಪದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಒಳ್ಳೆಯ ಹವ್ಯಾಸ ಜೀವನಕ್ಕೆ ಮುಖ್ಯ. ಅವು ನಮ್ಮನ್ನು ರಕ್ಷಿಸುತ್ತವೆ. ಇಂದಿನ ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ. ಅವರಲ್ಲಿ ಉತ್ತಮ ಹವ್ಯಾಸ ಬೆಳೆಸಿ. ಬದುಕನ್ನು ಎದುರಿಸುವ ಶಕ್ತಿ ತರುವಲ್ಲಿ ಪಾಲಕರ,ಶಿಕ್ಷಕರ ಪಾತ್ರ ಹೆಚ್ಚಿನದು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ,ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ನೀಡಿದ ಕಾರ್ಯ ಶಾಘ್ಲನೀಯ ಎಂದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು ಮಕ್ಕಳನ್ನು ಸಮಾಜದ ಸಂಪತ್ತನ್ನಾಗಿ ರೂಪಿಸಬೇಕು.ಅವರಿಂದ ಸುಸಂಸ್ಕೃತ ಸಮಾಜ ರೂಪುಗೊಳ್ಳುತ್ತದೆ. ನಮ್ಮ ಧರ್ಮ,ಪರಂಪರೆಯ ಜ್ಞಾನ ಅವರಲ್ಲಿರಬೇಕು.ಈ ಭಾಗದ ಜನತೆಯ ಉದಾರಭಾವದಿಂದ ಸ್ಥಾಪನೆಯಾದ ಈ ಪ್ರೌಢಶಾಲೆ ಅತೀವ ಪ್ರಗತಿ ಸಾಧಿಸಿದ್ದು ಅದು ಇನ್ನಷ್ಟು ಹೆಚ್ಚಬೇಕು. ಪ್ರತಿಯೊಬ್ಬರಿಗೂ ಮುಖ್ಯವಾದ ವಿದ್ಯೆಯನ್ನು ದಾಟಿಸುತ್ತ ಹೋಗಬೇಕು. ಸ್ಥಳೀಯ ಶಿಕ್ಷಣ ಕೇಂದ್ರಗಳನ್ನು ಉಳಿಸಿಕೊಳ್ಳುವಲ್ಲಿ ಮುತುವರ್ಜಿ ವಹಿಸಬೇಕು ಎಂದರು.
ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಹಿರಿಯರ ಶ್ರಮದಿಂದ ಆರಂಭಗೊಂಡ ಈ ಪ್ರೌಢಶಾಲೆ ಸಾವಿರಾರು ಮಂದಿಗೆ ಜೀವನ ಭದ್ರತೆ,ಸಮಾಜದಲ್ಲಿ ಮಾನ್ಯತೆ ದೊರಕಿಸಿಕೊಟ್ಟಿದೆ ಎಂದರು.
ತಾಲೂಕ ಅನುದಾನಿತ ಪ್ರೌಢಶಾಲಾ ಸಂಸ್ಥೆಗಳ ಅಧ್ಯಕ್ಷ ಡಾ|ಶಶಿಭೂಷಣ ಹೆಗಡೆ ಮಾತನಾಡಿ ಎಲ್ಲ ಸರಕಾರಗಳೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಕುರಿತು ತಾರತಮ್ಯ, ಹತ್ತಿಕ್ಕುವ ಮೂಲಕ ಮಲತಾಯಿ ಧೋರಣೆ ಅನುಸರಿಸಿಕೊಂಡು ಬಂದಿವೆ. ಲಾಭಕ್ಕಾಗಿ ಹಿಟ್ಟಿರದ ಈ ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು ಎಂದರು.
ಕೆನರಾ ಬ್ಯಾಂಕ್ ನಿವೃತ್ತ ಮಹಾಪ್ರಬಂಧಕ ಎಸ್.ಎಸ್.ಭಟ್ಟ ಮಸಗುತ್ತಿ ಮಾತನಾಡಿ ಜೀವನ ಶಿಕ್ಷಣ ಮುಖ್ಯ. ಈ ಪ್ರೌಢಶಾಲೆ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸಿದ್ದು ಹೆಮ್ಮೆ ಎಂದರು. ಸಂಸ್ಥೆಯ ಅಧ್ಯಕ್ಷ ನಾಗಪತಿ ಭಟ್ ಮಿಳಗಾರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಸದಸ್ಯರು,ನಿವೃತ್ತ ಶಿಕ್ಷಕರು, ಹಾಲಿ ಶಿಕ್ಷಕರು,ಸಿಬ್ಬಂದಿಗಳು,ಸ್ಥಳದಾನಿಗಳನ್ನು ಗೌರವಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ಹೆಗಡೆ ಹೆಗ್ಗನೂರು ಸ್ವಾಗತಿಸಿದರು.ಪ್ರಜ್ಞಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು.ವಿ|ಮಹಾಬಲೇಶ್ವರ ಭಟ್ಟ ಬಳಗ ವೇದಘೋಷ ಮಾಡಿದರು. ಡಿ.ಪಿ.ಹೆಗಡೆ,ಎಸ್.ಕೆ.ಹೆಗಡೆ,ಶ್ರೀಧರ ಹೆಗಡೆ ನಿರೂಪಿಸಿದರು.