ಕಾರವಾರ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರಕುಮಾರ ಕಾಂದೂ ಮುಂಡಗೋಡ ತಾಲೂಕಿನಲ್ಲಿ ವಿವಿಧ ಯೋಜನೆಗಳಡಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಸ್ವಸಹಾಯ ಸಂಘದ ಸದಸ್ಯರಿಂದ ಉತ್ಪಾದಿಸಿಲ್ಪಡುವ ವಸ್ತುಗಳ ಮಳಿಗೆಯಾದ ಸಂಜೀವಿನಿ ಮಾರ್ಟ್ ಗೆ ಭೇಟಿ ನೀಡಿ ತಯಾರಿಸುವ ವಸ್ತುಗಳಿಗೆ ವಿವಿಧ ವಿನ್ಯಾಸಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸಿದಾಗ, ಉತ್ತಮ ಆದಾಯವನ್ನು ಪಡೆಯಬಹುದು. ಸಂಜೀವಿನಿ ಒಕ್ಕೂಟದ ಸದಸ್ಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಠಿಸಲು ವಸ್ತುಗಳನ್ನು ಬ್ರಾಂಡಿಂಗ್ ಮಾಡಲು ಸಲಹೆ ನೀಡಿದರು.
ನಂತರ ಚಿಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾದ ಭೋಜನಾಲಯಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ತಿಳಿಸಿದರು. ಹಾಗೂ ಶಾಲೆಯಲ್ಲಿ ಅಕ್ಷರ ದಾಸೋಹದಡಿ ಮಕ್ಕಳಿಗೆ ನೀಡುವ ಆಹಾರ ಪರೀಕ್ಷಿಸಿ ಸ್ವಚ್ಚತೆ ಕಾಯ್ದುಕೊಳ್ಳಲು ತಿಳಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಪಾಳಾ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾದ ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಕೋಳಿಶೇಡ್ ಕಾಮಗಾರಿಗೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿದರು. ಪಾಳಾ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳ ಆರೋಗ್ಯ ಹಾಗೂ ಔಷಧಿಗಳ ಗುಣಮಟ್ಟ ತಪಾಸಣೆ ನಡೆಸಿದರು. ಆರೋಗ್ಯ ಕೇಂದ್ರದಲ್ಲಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಪ್ರಭಾರ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ, ನರೇಗಾ ಸಹಾಯಕ ನಿರ್ದೇಶಕರು ಟಿ.ವೈ ದಾಸನಕೊಪ್ಪ, ವಿವಿಧ ತಾಲೂಕ ಮಟ್ಟದ ಅಧಿಕಾರಿಗಳು, ನರೇಗಾ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಜರಿದ್ದರು.