ದಾಂಡೇಲಿ : ಬಿಡಾಡಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡು ರಕ್ಷಣೆಗಾಗಿ ರಸ್ತೆ ಬದಿ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನದೊಳಗಡೆ ಅವಿತು ಕೂತಿದ್ದ ಮುಂಗುಸಿಯೊಂದನ್ನು ರಕ್ಷಣೆ ಮಾಡಿದ ಘಟನೆ ಶನಿವಾರ ನಡೆದಿದೆ.
ಬಿಡಾಡಿ ನಾಯಿಗಳ ದಾಳಿಗೊಳಗಾಗಿ ಗಾಯಗೊಂಡು ಓಡಿ ಬಂದ ಮುಂಗುಸಿಯೊಂದು ನಗರದ ಜೆ.ಎನ್.ರಸ್ತೆಯ ಶಾ ಬಿಲ್ಡಿಂಗ್ ಮುಂಭಾಗದಲ್ಲಿಟ್ಟಿದ್ದ ದ್ವಿಚಕ್ರ ವಾಹನದೊಳಗಡೆ ಅವಿತು ಕೂತಿತ್ತು. ಗಾಯಗೊಂಡು ಜೀವ ರಕ್ಷಣೆಗಾಗಿ ದ್ವಿಚಕ್ರ ವಾಹನದೊಳಗಡೆ ಮುಂಗುಸಿ ಅವಿತು ಕೂತಿರುವುದನ್ನು ಗಮನಿಸಿದ ಪತ್ರಿಕಾ ವಿತರಕರಾದ ರಿಯಾಜ್ ನವಲಗುಂದ ಮುಂಗುಸಿಯನ್ನು ರಕ್ಷಣೆ ಮಾಡಬೇಕಾದ ನಿಟ್ಟಿನಲ್ಲಿ ಉರಗ ಪ್ರೇಮಿ ರಜಾಕ್ ಶಾ ಅವರಿಗೆ ಕರೆ ಮಾಡಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಉರಗ ಪ್ರೇಮಿ ರಜಾಕ್ ಶಾ ಸುರಕ್ಷಿತವಾಗಿ ಮುಂಗುಸಿಯನ್ನು ದ್ವಿಚಕ್ರ ವಾಹನದಿಂದ ಹೊರತೆಗೆದು, ಗಂಭೀರ ಗಾಯಗೊಂಡಿದ್ದ ಅದನ್ನು ಪಶು ವೈದ್ಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಯನ್ನು ನೀಡಿ, ಆನಂತರ ಅರಣ್ಯ ಇಲಾಖೆಯ ಪಶು ಆಸ್ಪತ್ರೆಗೆ ಹಸ್ತಾಂತರಿಸಿದರು.
ಒಟ್ಟಿನಲ್ಲಿ ರಿಯಾಜ್ ನವಲಗುಂದ ಅವರ ಸಮಯೋಚಿತ ನಿರ್ಧಾರ ಮತ್ತು ರಜಾಕ್ ಶಾ ಅವರ ತಡವರಿಯದ ಸ್ಪಂದನೆಯಿಂದ ಮುಂಗುಸಿಯೊಂದು ಬದುಕುಳಿಯುವಂತಾಗಿದೆ.