ದಾಂಡೇಲಿ : ನಗರದ ಬಂಗೂರುನಗರದಲ್ಲಿರುವ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಎಸ್.ಡಿ
ಎಂ ನಾರಾಯಣ ಹಾರ್ಟ್ ಸೆಂಟರ್ ಆಸ್ಪತ್ರೆಯ ಖ್ಯಾತ ಹೃದಯ ರೋಗ ತಜ್ಞ ಡಾ.ವಿವೇಕಾನಂದ ಗಜಪತಿ ಮಾರ್ಗದರ್ಶನದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಶನಿವಾರ ಚಾಲನೆಯನ್ನು ನೀಡಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ.ವಿವೇಕಾನಂದ ಗಜಪತಿ, ವೇಗವಾಗಿ ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ಅಷ್ಟೇ ವೇಗವಾಗಿ ರೋಗ ರುಜಿನಗಳು ಬೆಂಬಿಡದೆ ಕಾಡುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಆರೋಗ್ಯಕ್ಕೆ ಹಿತವಾಗುವಂತಹ ಆಹಾರ ಕ್ರಮಗಳನ್ನು ಅನುಸರಿಸಬೇಕು. 40ವರ್ಷ ಮೇಲ್ಪಟ್ಟವರು ಕಾಲಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಶಿಬಿರ ಸ್ಥಳೀಯ ಜನತೆಗೆ ಅನುಕೂಲಕರವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಔದ್ಯೋಗಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಭು ಪ್ರಸಾದ್ ಅವರು ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವ ಮೂಲಕ ತಮ್ಮ ತಮ್ಮ ಆರೋಗ್ಯ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಹಿರಿಯ ಅಧಿಕಾರಿ ಅಶೋಕ್ ಶರ್ಮಾ, ನಗರದ ಹಿರಿಯ ವೈದ್ಯರುಗಳಾದ ಡಾ.ಜಿ.ವಿ.ಭಟ್, ಡಾ.ಎನ್.ಜಿ.ಬ್ಯಾಕೋಡ್, ಡಾ.ಆರ್.ಕೆ. ಕುಲಕರ್ಣಿ, ಡಾ.ಮುಕುಂದ್ ಕಾಮತ್, ಡಾ.ಜಿ.ಡಿ.ಭಂಡಾರಿ, ನಗರದ ವೈದ್ಯರುಗಳಾದ ಡಾ.ಶೇಖರ್.ಸಿ.ಎಚ್, ಡಾ.ಗೌರಿ, ಡಾ.ವಿಜಯಕುಮಾರ್ ಕೊಚ್ಚರಗಿ, ಔದ್ಯೋಗಿಕ ಆರೋಗ್ಯ ಕೇಂದ್ರದ ವೈದ್ಯರುಗಳಾದ ಡಾ.ಸುಮೀತ್ ಅಗ್ನಿಹೋತ್ರಿ, ಡಾ.ಪ್ರಪುಲ್ ಮಳವಳ್ಳಿ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ, ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಆಸ್ಪತ್ರೆಯ ಡಾ.ಮಹಾಂತೇಶ್, ಡಾ.ಲಲಿತಾ ಹಾಗೂ ಕಾಗದ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ಅವರು ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರದಲ್ಲಿ 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.