ಯಲ್ಲಾಪುರ: ತಾಲೂಕಿನ ಉಮ್ಮಚಗಿ ವಿದ್ಯಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಉಮ್ಮಚಗಿ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ಮತ್ತು ನರೇಗಾ ವಿಶೇಷ ಗ್ರಾಮ ಸಭೆ ನಡೆಯಿತು.
ಗ್ರಾ. ಪಂ. ವ್ಯಾಪ್ತಿಯ ಉಮ್ಮಚಗಿ, ತಾರೇಹಳ್ಳಿ, ಚವತ್ತಿ, ಕಾನಗೋಡ, ಕೋಟೆಮನೆ ಮುಂತಾದ ಗ್ರಾಮಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಉಮ್ಮಚಗಿಯ ಪ್ರೌಢಶಾಲಾ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ದುರಸ್ತಿ, ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಪಿಲ್ಟರ್ ಬೇಡಿಕೆ, ಆಟದ ಅಂಗಳ ನಿರ್ಮಾಣ, ಆಟದ ಪರಿಕರಗಳ ಬೇಡಿಕೆ, ಶಾಲೆಯಲ್ಲಿ ಕುಳಿತುಕೊಳ್ಳಲು ಆಸನಗಳ ಕೊರತೆ ಸೇರಿದಂತೆ ವಿವಿಧ ಬೇಡಿಕೆಗಳು ಕೇಳಿಬಂದವು. ಉಮ್ಮಚಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಂಜೆ ಶಾಲಾ ವೇಳೆಯ ನಂತರ ಬಸ್‌ನ ಸಮಸ್ಯೆ ಉಂಟಾಗುತ್ತಿರುವುದರ ಕುರಿತು ಗಮನ ಸೆಳೆದರು. ಶಿರಸಿ ಮಾರ್ಗದಲ್ಲಿ ಹೋಗುವ ಬಸ್ ಗಳ ಚಾಲಕ-ನಿರ್ವಾಹಕರು ವಿದ್ಯಾರ್ಥಿಗಳು ಪ್ರೌಢಶಾಲೆಯಿಂದ ಬರುವುದನ್ನು ಕಂಡರೂ, ತುಸು ಕಾಲ ನಿಲುಗಡೆ ಮಾಡಿ, ಹತ್ತಿಸಿಕೊಳ್ಳದಿರುವುದರಿಂದ ಬಾಳೆಹದ್ದ, ಚವತ್ತಿ ಮುಂತಾದ ದೂರದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮನೆ ತಲುಪಲು ಅನೇಕ ದಿನ ರಾತ್ರಿಯಾಗುತ್ತದೆಂದು ತಮ್ಮ ಅಳಲು ತೋಡಿಕೊಂಡರು. ಕೆಲವು ನಿರ್ವಾಹಕರು ಬಸ್ಸಿನಲ್ಲಿ ತಮ್ಮನ್ನು ನಿಕೃಷ್ಟವಾಗಿ ಕಾಣುವುದಾಗಿಯೂ ಹೇಳಿದರು.
ಉಮ್ಮಚಗಿ ಪ್ರೌಢಶಾಲೆಯ ಪಕ್ಕದಲ್ಲಿರುವ ಕೆಲವು ಮನೆಯವರು ತಮ್ಮ ಮನೆಯ ಕೊಳಚೆ ನೀರನ್ನು ಪ್ರೌಢಶಾಲೆಯ ಆವಾರದೊಳಗೆ ಹರಿಬಿಡುತ್ತಿರುವ ಕಾರಣ ಉಂಟಾಗುತ್ತಿರುವ ಅಸಹ್ಯ ದುರ್ವಾಸನೆಯಿಂದಾಗಿ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿರುವುದಾಗಿಯೂ ತಿಳಿಸಿದರು.
ಇದೇ ಸಮಯದಲ್ಲಿ ಉಮ್ಮಚಗಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಧಾ ಹೆಗಡೆ ಮಾತನಾಡಿ, ಪ್ರೌಢಶಾಲೆಯಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದ್ದರೂ, ಸಂಜೆ ಹೊತ್ತಿನಲ್ಲಿ ಶಾಲಾ ಆವರಣದೊಳಗೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಅದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮಕ್ಕಳ ಕುಂದುಕೊರತೆಗಳಗಳ ಬೇಡಿಕೆಗಳನ್ನು ಆಲಿಸಿದ ನಂತರ ಗ್ರಾ.ಪಂ. ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಮಾತನಾಡಿ, ಶೌಚಾಲಯದ ದುರಸ್ತಿಯನ್ನು ತಕ್ಷಣ ಮಾಡಿಸಿಕೊಡುತ್ತೇವೆ. ಕೋಟೆಮನೆ ಶಾಲೆಗೆ ಒಂದೆರಡು ದಿನಗಳೊಳಗೆ ವಾಟರ್ ಪಿಲ್ಟರ್ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಉಳಿದ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿ, ಕ್ರಮ ಕೈಗೊಳ್ಳಲಾಗುವುದು. ಉಮ್ಮಚಗಿಯಲ್ಲಿ ಉತ್ತಮ ಗ್ರಂಥಾಲಯವಿದ್ದು, ವಿದ್ಯಾರ್ಥಿಗಳು ತಮ್ಮ ಇಷ್ಟದ ಪುಸ್ತಕಗಳನ್ನು ಓದಿ ನಿಮ್ಮ ಜ್ಞಾನಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಉಮ್ಮಚಗಿ ಪ್ರೌಢಶಾಲಾ ವಿದ್ಯಾರ್ಥಿ ಶ್ರೀಕಾಂತ ರಾಮಾ ಗೌಡ ಸಭಾಧ್ಯಕ್ಷತೆ ವಹಿಸಿದ್ದರು. ಪಿಡಿಒ ನಸ್ರೀನಾ ಎಕ್ಕುಂಡಿ, ಸಿ.ಆರ್.ಪಿ. ವಿಷ್ಣು ಭಟ್ಟ, ಗ್ರಾ.ಪಂ. ಉಪಾಧ್ಯಕ್ಷೆ ಗಂಗಾ ಹೆಗಡೆ, ಸದಸ್ಯರಾದ ಶಿವರಾಯ ಪೂಜಾರಿ, ಲಲಿತಾ ವಾಲೀಕಾರ, ಖೈತಾನ್ ಡಿಸೋಜ, ರೂಪಾ ಪೂಜಾರಿ, ಅಶೋಕ ಪೂಜಾರಿ, ಸರಸ್ವತಿ ಪಟಗಾರ, ತಿಮ್ಮವ್ವ ಬಸಾಪುರ, ಗ.ರಾ. ಭಟ್ಟ ಉಪಸ್ಥಿತರಿದ್ದರು.
ನಂತರ ಉದ್ಯೋಗ ಖಾತ್ರಿ ಗ್ರಾಮ ಸಭೆ ನಡೆಯಿತು. ಕಾರ್ಯದರ್ಶಿ ಮೋಹನ ನಿರ್ವಹಿಸಿದರು.