ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರಕಾರದ ಆಕ್ಷೇಪ ಇರುತ್ತದೆ. ಜನಸಾಮಾನ್ಯರ ಜನಜೀವನಕ್ಕೆ ಮಾರಕವಾಗುವ ವರದಿಯನ್ನು ಕರ್ನಾಟಕದಲ್ಲಿ ಜ್ಯಾರಿಗೆ ಅವಕಾಶ ನೀಡಲಾರೆವು ಎಂದು ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಸತೀಶ್ ಶೈಲ್ ಮತ್ತು ಭೀಮಣ್ಣ ನಾಯ್ಕ ಅವರ ನೇತೃತ್ವದಲ್ಲಿ ಹೋರಾಟಗಾರರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ಮತ್ತು ಪ್ರಧಾನ ಸಂಚಾಲಕ ಜಿ.ಎಮ್. ಶೆಟ್ಟಿ ಅವರ ನಿಯೋಗವು ಭೆಟ್ಟಿಯಾದ ಸಂದರ್ಭದಲ್ಲಿ ಮೇಲಿನಂತೆ ಸರಕಾರದ ನಿಲುವನ್ನು ಪ್ರಕಟಿಸಿದರು.
ಚರ್ಚೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಚಿವರು ಮತ್ತು ಶಾಸಕರು ವರದಿ ಅನುಷ್ಠಾನದಿಂದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಜನಸಾಮಾನ್ಯರ ನೈಜ ಜೀವನಕ್ಕೆ ಉಂಟಾಗುತ್ತಿರುವ ಸಮಸ್ಯೆಗಳನ್ನ ವಿವರಿಸಿದರು. ಅಲ್ಲದೇ, ಜಿಲ್ಲೆಯಲ್ಲಿನ ಅರಣ್ಯ ಪ್ರದೇಶದ ಮೇಲೆ ಅವಲಂಭಿತವಾಗಿರುವ ಸುಮಾರು 85,000 ಕುಟುಂಬಗಳ ಭೂಮಿ ಹಕ್ಕಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಅವರು ವಿವರಿಸಿದರು.
ಕಸ್ತೂರಿ ರಂಗನ್ ವರದಿಯ ಸಮಸ್ಯೆಯನ್ನ ಸರಕಾರಕ್ಕೆ ಮನದಟ್ಟು ಮಾಡುವಲ್ಲಿ ಸ್ಫಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರುಗಳಿಗೆ ಹೋರಾಟಗಾರರ ವೇದಿಕೆಯ ಪ್ರಧಾನ ಸಂಚಾಲಕರಾದ ಜಿ.ಎಮ್. ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ಜನವಸತಿ ಪ್ರದೇಶ ನಿರ್ಬಂಧ ಅವೈಜ್ಞಾನಿಕ:
ಈಗಾಗಲೇ ವಾಸ್ತವ್ಯ ಮತ್ತು ಸಾಗುವಳಿ ಮಾಡುತ್ತಿರುವ ಕಂದಾಯ ಮತ್ತು ಅರಣ್ಯ ಪ್ರದೇಶದಲ್ಲಿನ ಜನ ವಸತಿ ಪ್ರದೇಶದಿಂದ, ವರದಿಯ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಮುಕ್ತಗೊಳಿಸಲು ಕ್ರಮ ಜರುಗಿಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಸ್ಥಳದಲ್ಲಿ ನಿರ್ಧೇಶನ ನೀಡಿದರು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.