ಯಲ್ಲಾಪುರ: ಪಟ್ಟಣದ ಎಪಿಎಂಸಿ ಬಳಿ ಶಿರಸಿ ರಸ್ತೆಯಿಂದ ಕವಲೊಡೆದ ಎಪಿಎಂಸಿ-ಗುಂಡ್ಕಲ್ ರಸ್ತೆ ಮೊದಲೇ ಸಂಪೂರ್ಣ ಹದಗೆಟ್ಟಿದ್ದು, ಇದೀಗ ಅರಣ್ಯ ಇಲಾಖೆಯವರು ಅಕೇಶಿಯಾ ಗಿಡಗಳ ಕಟಾವು ಆರಂಭಿಸಿದ್ದು, ಅದನ್ನು ಸಾಗಿಸುವ ಲಾರಿಗಳ ಓಡಾಟದಿಂದ ರಸ್ತೆ ಇನ್ನಷ್ಟು ಕಿತ್ತೆದ್ದು ಹೋಗಿದೆ.
ಎಪಿಎಂಸಿ-ಗುಂಡ್ಕಲ್ ರಸ್ತೆಗೆ ಕಳೆದ 5-6 ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಎರಡು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು, ಹೊಂಡ-ಗುಂಡಿಗಳಿಂದಾಗಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿತ್ತು. ಹುಲೆಕೋಣೆ, ಗುಂಡ್ಕಲ್ ಕ್ರಾಸ್ ಭಾಗದಲ್ಲಿ ಬೆಳೆದ ಅಕೇಶಿಯಾ ಗಿಡಗಳನ್ನು ಕಳೆದ ಕೆಲ ದಿವಸಗಳಿಂದ ಅರಣ್ಯ ಇಲಾಖೆ ಕಟಾವು ಮಾಡುವ ಕಾರ್ಯವನ್ನು ಕೈಗೊಂಡಿದೆ. ಅದನ್ನು ಸಾಗಿಸುವ ಲಾರಿ, ಟ್ರ್ಯಾಕ್ಟರ್‌ಗಳ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಡಾಂಬರು, ಕಡಿ ಕಿತ್ತು ಹೋಗಿದ್ದು, ವಾಹನಗಳ ಸವಾರರು ಟೈರ್ ಪಂಕ್ಚರ್ ಆಗಬಹುದೆಂಬ ಆತಂಕದಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ.
ಕಾಟಾಚಾರದ ಪ್ಯಾಚ್ ವರ್ಕ್ :
ಲೋಕೋಪಯೋಗಿ ಇಲಾಖೆ ಎಪಿಎಂಸಿ-ಗುಂಡ್ಕಲ್ ರಸ್ತೆಯ ಹೊಂಡಗಳನ್ನು ಮುಚ್ಚಿ, ತೇಪೆ ಹಾಕಲು ಮುಂದಾಗಿದ್ದು, ಕೇವಲ 2-3 ದಿವಸಗಳಲ್ಲಿ ಕಾಟಾಚಾರಕ್ಕೆ ಕಾಮಗಾರಿ ನಡೆಸಲಾಗಿದೆ. ಅಲ್ಲಲ್ಲಿ ಹೊಂಡಗಳನ್ನು ಮುಚ್ಚಿ, ಅನೇಕ ಕಡೆಗಳಲ್ಲಿ ಮುಚ್ಚದೇ ಹಾಗೇ ಬಿಡಲಾಗಿದೆ. ಹೊಂಡಗಳಿಗೆ ತೇಪೆ ಹಾಕಿ ಮುಗಿಯುವ ಮುನ್ನವೇ ಡಾಂಬರು ಕಿತ್ತು ಹೋಗಲಾರಂಭಿಸಿದೆ. ಎಪಿಎಂಸಿಯಿಂದ ಹುಲೇಕೋಣೆವರೆಗೆ ಮಾತ್ರ ಅಲ್ಲಲ್ಲಿ ತೇಪೆ ಹಾಕಿ ಕಣ್ಣೊರೆಸುವ ಕೆಲಸ ಮಾಡಲಾಗಿದೆ. ಆದರೆ ಲಾರಿ, ಟ್ರ್ಯಾಕ್ಟರ್ ಗಳು ಓಡಾಡಿ ರಸ್ತೆ ಹಾಳಾದ ಭಾಗದಲ್ಲಿ ಕಾಮಗಾರಿ ನಡೆಸುವ ಸುಳಿವಿಲ್ಲ. ಅದಕ್ಕಿಂತ ಸ್ವಲ್ಪ ಹಿಂದೆಯೇ ಕಾಮಗಾರಿ ಮುಗಿದಿದೆ. ಒಟ್ಟಾರೆ ಹದಗೆಟ್ಟ ರಸ್ತೆಯಲ್ಲಿ ಓಡಾಡುವ ಕಷ್ಟ ಸಾರ್ವಜನಿಕರಿಗೆ ತಪ್ಪುತ್ತಿಲ್ಲ.