Slide
Slide
Slide
previous arrow
next arrow

ಹಿರೇಗುತ್ತಿ ಕಾಲೇಜು ಅಂತಃಸಂಪತ್ತಿನಿಂದ ಶ್ರೀಮಂತವಾಗಿದೆ : ಹೊನ್ನಪ್ಪ ನಾಯಕ

300x250 AD

ಗೋಕರ್ಣ: ಭೌತಸಂಪತ್ತಿನ ಶ್ರೀಮಂತಿಕೆಯೆಡೆಗೆ ಅತಿಯಾಗಿ ಯೋಚಿಸುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಅಂತಃಸತ್ವವನ್ನು ಹೆಚ್ಚಿಸುತ್ತ, ಶಿಕ್ಷಣದ ಮೂಲಕ ಎದೆ ತುಂಬುವ ಕೆಲಸ ಮಾಡುತ್ತಿರುವ ಹಿರೇಗುತ್ತಿ ಪದವಿಪೂರ್ವ ಕಾಲೇಜು ಅಂತಃಸಂಪತ್ತಿನಿಂದ ಶ್ರೀಮಂತವಾಗಿದೆ ಎಂದು ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೊನ್ನಪ್ಪ ನಾಯಕ ತಿಳಿಸಿದರು.

ಕಾಲೇಜಿನ 2023-24 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಜಾವೆಲಿನ್ ಎಸೆತಗಾರ ಶೇಖರ ಗೌಡ ಮತ್ತು ವಿಭಾಗ ಮಟ್ಟದಲ್ಲಿ ಕನ್ನಡ ಚರ್ಚಾ ಸ್ಪರ್ಧೆಗೆ ಆಯ್ಕೆಯಾದ ಶ್ರೀನಿಧಿ ನಾಯ್ಕಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಆದರ್ಶ ವಿದ್ಯಾರ್ಥಿ ಗೌರವಕ್ಕೆ ಭಾಜನರಾದ ದತ್ತಾತ್ರೇಯ ಹಳ್ಳೇರ ಹಾಗೂ ಸುಶ್ಮಿತಾ ನಾಯ್ಕ ಎಂಬ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಪ್ರಧಾನ ಉಪನ್ಯಾಸ ನೀಡಿದ ಶಿಕ್ಷಕ ಚಿದಾನಂದ ಭಂಡಾರಿ ರಾಷ್ಟ್ರಾಭಿಮಾನ, ಭಾಷಾಭಿಮಾನ ಮತ್ತು ಆತ್ಮವಿಶ್ವಾಸಗಳನ್ನು ಜಾಗೃತಗೊಳಿಸುವ ದೃಷ್ಟಾಂತಗಳನ್ನು ನೀಡುತ್ತ, ಸ್ಫೂರ್ತಿಯುತವಾದ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ, ಕೌಶಲ್ಯಾಧಾರಿತ ಶಿಕ್ಷಣದೆಡೆಗೆ ತೆರೆದುಕೊಳ್ಳುವ ಅಗತ್ಯತೆಯನ್ನು, ವಾಸ್ತವಾಂಶಗಳನ್ನು ಉದಾಹರಿಸುತ್ತ ಮನಮುಟ್ಟುವಂತೆ ಮಾತನಾಡಿದರು. ಕಾಲೇಜಿನ ಪ್ರಭಾರಿ ಪ್ರಾಚಾರ್ಯ ನಾಗರಾಜ ಗಾಂವಕರ ಸಭಾಧ್ಯಕ್ಷತೆ ವಹಿಸಿ, ಮಾತನಾಡಿದರು.

300x250 AD

ನಿವೃತ್ತ ಪ್ರಚಾರ್ಯ ಅರುಣ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿ ಮುಖ್ಯ. ಆ ಗುರಿಯ ಸಫಲತೆಯಲ್ಲಿ ವಿದ್ಯಾರ್ಥಿಗಳು ಕಾಯಾ, ವಾಚಾ, ಮನಸ್ಸಾ ತೊಡಗಿಸಿಕೊಳ್ಳಬೇಕು ಎಂದರು. ಆಶ್ರಯ ಫೌಂಡೇಶನ್ ಅಧ್ಯಕ್ಷ ರಾಜೀವ ಗಾಂವಕರ ಕಾಲೇಜಿನ ಸಮಗ್ರ ಕಾರ್ಯಚಟುವಟಿಕೆಗಳನ್ನು ಮುಕ್ತವಾಗಿ ಶ್ಲಾಘಿಸಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎನ್.ಟಿ.ನಾಯಕ ವಿದ್ಯಾರ್ಥಿಗಳ ಶಿಸ್ತು, ಸಂಯಮದ ನಡುವಳಿಕೆಗಳನ್ನು ಮೆಚ್ಚಿ ಮಾತನಾಡಿದರು.

ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಪುರಸ್ಕಾರಗಳ ವಿವರಣೆಯನ್ನು ಗಣಿತಶಾಸ್ತ್ರ ಉಪನ್ಯಾಸಕಿ ಸುಜಾತಾ ನಾಯಕ ನಿರ್ವಹಿಸಿದರು. ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರ ಬಹುಮಾನ ವಿತರಣೆಯನ್ನು ಜೀವಶಾಸ್ತ್ರ ಉಪನ್ಯಾಸಕಿ ನೇತ್ರಾವತಿ ನಾಯಕ ನಿರ್ವಹಿಸಿದರು. ಕ್ರೀಡಾ ಚಟುವಟಿಕೆಗಳ ಬಹುಮಾನ ವಿತರಣೆಯನ್ನು ಭೌತಶಾಸ್ತ್ರ ಉಪನ್ಯಾಸಕಿ ವಿನಯಾ ಗೌಡ ನಿರ್ವಹಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ವಿಜಯಲಕ್ಷ್ಮೀ ನಾಯಕ ವರದಿ ವಾಚಿಸಿದರು. ಇತಿಹಾಸ ಉಪನ್ಯಾಸಕಿ ಶಾರದಾ ನಾಯಕ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಸೀಮಾ ಪಟಗಾರ ವಂದಿಸಿದರು. ಕನ್ನಡ ಉಪನ್ಯಾಸಕ ರಮೇಶ ಗೌಡ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top