ಕಾರವಾರ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ-ಪಾಲನೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕೂಸಿನ ಮನೆ’(ಶಿಶು ಪಾಲನಾ ಕೇಂದ್ರ) ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ 12 ತಾಲ್ಲೂಕುಗಳ ಪೈಕಿ ಒಟ್ಟು 51 ಕಡೆಗಳಲ್ಲಿ ಜಿಲ್ಲಾ ಪಂಚಾಯತ್‌ನಿಂದ ಕೂಸಿನ ಮನೆ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‌ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಕಾರಿ ಈಶ್ವರ ಕುಮಾರ ಕಾಂದೂ ತಿಳಿಸಿದರು.
ಕೆಲಸದ ಸಮಯದಲ್ಲಿ ಹಳ್ಳಿ ಮಹಿಳೆಯರು ತಮ್ಮ ಚಿಕ್ಕ ಮಕ್ಕಳ ಕುರಿತು ಚಿಂತಿಸದೆ. ನಿರ್ಭಿತಿಯಿಂದ ಕೆಲಸ ನಿರ್ವಹಿಸಬಹುದು. ಪ್ರತಿಯೊಬ್ಬ ಕೂಲಿಕಾರರೂ ತಮ್ಮ ಹತ್ತಿರದ ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಡುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೂಲಿ ಕಾರ್ಮಿಕರ ಶಿಶುಗಳ ಪೋಷಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶನದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ 229 ಗ್ರಾಮ ಪಂಚಾಯತಿಗಳ ಪೈಕಿ ಜಾಗದ ಹಾಗೂ ಸರಕಾರಿ ಕಟ್ಟಡಗಳ ಲಭ್ಯತೆಗೆ ಅನುಗುಣವಾಗಿ ಆಯ್ದ 51 ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಕೂಸಿನ ಮನೆ(ಶಿಶು ಪಾಲನಾ ಕೇಂದ್ರ) ಕಾರ್ಯಾರಂಭಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಇನ್ನುಮುಂದೆ ಗ್ರಾಮೀಣ ಪ್ರದೇಶದ ಮಹಿಳೆಯರು ಕೂಸಿನ ಮನೆಯಲ್ಲಿ ತಮ್ಮ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಬಿಟ್ಟು ನಿಶ್ಚಿಂತೆಯಿಂದ ಕೆಲಸಕ್ಕೆ ತೆರಳಬಹುದಾಗಿದೆ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಲಿ ಇರುವ ಸರ್ಕಾರಿ ಶಾಲೆ, ಸಮುದಾಯ ಭವನ ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳನ್ನು ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಆರಂಭಿಸುವ ಆಯ್ಕೆಗೆ ಪರಿಗಣಿಸಿದೆ. ಈ ಕಟ್ಟಡಗಳ ಅಲ್ಪಸ್ವಲ್ಪ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಆರಂಭದಲ್ಲಿ ಪ್ರತಿ ಘಟಕಕ್ಕೆ ₹ 1 ಲಕ್ಷ ಅನುದಾನ ಬಿಡುಗಡೆ ಮಾಡುತ್ತದೆ. ಶಿಶುಗಳಿಗೆ ಪೂರಕ ಪೌಷ್ಠಿಕ ಆಹಾರ, ತೊಟ್ಟಿಲು, ಆಟಿಕೆ ಸಾಮಗ್ರಿ, ಕುಡಿಯುವ ನೀರು, ಗಾಳಿ-ಬೆಳಕು ಮತ್ತಿತರ ಸೌಲಭ್ಯಗಳನ್ನು ಈ ಕೇಂದ್ರದಲ್ಲಿ ಕಲ್ಪಿಸಲಾಗುತ್ತದೆ.
ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಕೂಲಿಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿ-ನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ. ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಕೆಲಸದಿಂದ ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು, ಪೌಷ್ಠಿಕ ಆಹಾರ ದೊರೆಯದೇ ಮಕ್ಕಳು ಅಪೌಷ್ಠಿಕತೆಗೆ ಒಳಗಾಗುತ್ತಾರೆ. ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುವ ಸಂಭವವಿರುತ್ತದೆ. ಈ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರ ಕೂಸಿನ ಮನೆ ಯೋಜನೆ ರೂಪಿಸಿದೆ.
ವಿಶೇಷವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿರುವ 22 ರಿಂದ 45 ವರ್ಷ ವಯಸ್ಸಿನೊಳಗಿನ ಕನಿಷ್ಠ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿರುವ 10 ಜನ ಮಹಿಳಾ ಕೂಲಿ ಕಾರ್ಮಿಕರನ್ನೇ ಈ ಕೂಸಿನ ಮನೆಗೆ ಕೇರ್ ಟೆಕರ್ಸ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇವರಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ಗೌರವಧನ ನೀಡದೇ ಮನರೇಗಾ ಯೋಜನೆಯಡಿ ಎನ್.ಎಂ.ಆರ್ ಸೃಜನೆ ಮಾಡಿ ದಿನಕ್ಕೆ ರೂ. 316 ರಂತೆ ನೂರು ದಿನಗಳ ವರೆಗೆ ಕೆಲಸ ನೀಡಲಾಗುತ್ತದೆ. ಒಂದು ವೇಳೆ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರು 100 ದಿನ ಕೆಲಸ ನಿರ್ವಹಿಸಿದರೆ ನಂತರ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ ಎಂದರು.
ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಪ್ರಾರಂಭಿಸುವ ಹಿನ್ನಲೆಯಲ್ಲಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2 ಜನರಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡ ಪರಿಣಿತ ಮಾಸ್ಟರ್ ಟ್ರೇನರ್‌ಗಳು ಜಿಲ್ಲೆಯ 8 ಸ್ಥಳಗಳಲ್ಲಿ ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿ ಕೇರ್ ಟೇಕರ್ಸ್ಗಳಿಗೆ ತರಬೇತಿ ನೀಡಿದ್ದಾರೆ.