ಯಲ್ಲಾಪುರ: ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ, ಸೋಮವಾರ ನಾಗರಿಕ ವೇದಿಕೆಯ ಆಶ್ರಯದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಎಂ.ಗುರುರಾಜ್ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ವೈ ಟಿ ಎಸ್ ಎಸ್ ಮೈದಾನದಿಂದ ಹೊರಟ ಮೆರವಣಿಗೆ ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್ ಮೂಲಕ ತಹಸೀಲ್ದಾರ ಕಚೇರಿ ತಲುಪಿತು. ಸುಮಾರು ಐದು ನೂರರಷ್ಟು ಜನರು ಬೋರ್ಡ್, ಬ್ಯಾನರ್ ಹಿಡಿದು ಘೋಷಣೆ ಕೂಗಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಪಟ್ಟಣದ ಮಧ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ನಿತ್ಯ ಅಪಘಾತಗಳ ಸರಮಾಲೆ ಜನರನ್ನು ಆಘಾತಗೊಳಿಸುತ್ತಿದೆ. ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಹಾಗೂ ಜನರ ಸುರಕ್ಷತೆಯ ಸಲುವಾಗಿ ಬೈಪಾಸ್ ಅಗತ್ಯತೆ ಇದೆ. ಹೆದ್ದಾರಿಯಲ್ಲಿ ಶಾಲಾ ಮಕ್ಕಳು ಅಪಾಯಕಾರಿ, ಅಸುರಕ್ಷ ಸ್ಥಿತಿಯಲ್ಲಿ ದಾಟಿ ಹೋಗಬೇಕಿದೆ. ಪಾದಾಚಾರಿಗಳ ಓಡಾಟವೂ ಕಷ್ಟವಾಗುತ್ತಿದೆ. ಹಾಗಾಗಿ ಬೈಪಾಸ್ ಅನಿವಾರ್ಯವಾಗಿದೆ. ಅಂಕೋಲಾ ಬಾಳೆಗುಳಿಯಿಂದ ಮಾಸ್ತಿಕಟ್ಟೆಯವರೆಗೆ ಚತುಷ್ಪಥ ಆಗಲಿದೆ. ಅದಕ್ಕೂ ಮುಂಚಿತವಾಗಿ ಪಟ್ಟಣದಲ್ಲಿ ಬೈಪಾಸ್ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ರವಿ ಶಾನಭಾಗ, ಮಹಮ್ಮದ್ ಗೌಸ್, ಬೀರಣ್ಣ ನಾಯಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಜಗನ್ನಾಥ ಮರಾಠೆ,ಶಿರೀಷ ಪ್ರಭು, ಎಂ. ಆರ್.ಹೆಗಡೆ ಕುಂಬ್ರಿಗುಡ್ಡೆ, ರವಿ ಹೆಗಡೆ, ಮಾಧವ ನಾಯಕ, ಸುರೇಶ್ ಬೋರಕರ್, ಬೇಬಿ ಅಮಿನಾ ಶೇಖ್, ಅಬ್ದುಲ್ ಖಾದರ್ ಶೇಖ್, ದಾಸಿಂತ ಫರ್ನಾಂಡೀಸ್, ಜೈರಾಮ ಗುನಗಾ, ಉಮೇಶ ಭಾಗ್ವತ್, ರಾಜೇಂದ್ರಪ್ರಸಾದ ಭಟ್, ಗಜಾನನ ನಾಯ್ಕ, ನಾರಾಯಣ ನಾಯಕ, ಶ್ಯಾಮಿಲಿ ಪಾಟಣಕರ್, ಭವ್ಯಾ ಶೆಟ್ಟಿ, ಶ್ರೀರಂಗ ಕಟ್ಟಿ, ನಮಿತಾ ಬೀಡಿಕರ್, ಬಾಬು ಬಾಂದೇಕರ್, ತುಳಸಿ ಪಾಲೇಕರ್,ಪುಷ್ಪಾ ನಾಯ್ಕ, ನಾಗೇಶ್ ಯಲ್ಲಾಪುರಕರ್,ಸುಧೀರ ಕೊಡ್ಕಣಿ ಇತರರು ಭಾಗವಹಿಸಿದ್ದರು.
ಕುಸಿದು ಬಿದ್ದ ಶೋಭಾ ಹುಲ್ಮನಿ: ಮನವಿ ಸಲ್ಲಿಕೆಯ ವೇಳೆ ಸಾಮಾಜಿಕ ಕಾರ್ಯಕರ್ತೆ ಶೋಭಾ ಹುಲಮನಿ ಆಕಸ್ಮಿಕವಾಗಿ ಕುಸಿದು ಬಿದ್ದರು. ಇದರಿಂದ ಕೆಲಕಾಲ ಆಂತಕದ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡರು.
ತಾಲೂಕಿನ ಪ್ರಮುಖ ಬೇಡಿಕೆಯ ಈಡೇರಿಕೆಗಾಗಿ ಈ ನಡೆದ ಪ್ರತಿಭಟನೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನರ ಸ್ಪಂದನೆ ದೊರೆಯಲಿಲ್ಲ. ನಿರೀಕ್ಷಿತ ಸಂಖ್ಯೆಯ ಜನರೂ ಸೇರಲಿಲ್ಲ. ಸೇರಿದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಒಂದಷ್ಟು ಪಟ್ಟಣದ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ಪ್ರತಿಭಟನೆ ಕುರಿತು ತಿಂಗಳಿನಿಂದ ಜೋರಾದ ಪ್ರಚಾರ ನಡೆಸಿದರೂ ಗ್ರಾಮೀಣ ಭಾಗದ ಜನತೆ ಇದರತ್ತ ಸುಳಿಯದೇ ಇರುವುದು ವಿಚಿತ್ರವಾಗಿತ್ತು.
ಹಿಂದೆ ಯಲ್ಲಾಪುರ ಜಿಲ್ಲೆ ನಿರ್ಮಾಣಕ್ಕೆ ಆಗ್ರಹಿಸಿ ಹೋರಾಟ ನಡೆದಿತ್ತು, ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕಾಗಿ ಈಗಲೂ ಆಗಾಗ ನೆನಪಾದಾಗ ಹೋರಾಟ ನಡೆಯುತ್ತಿದೆ. ಬೈಪಾಸ್ ಹೋರಾಟವೂ ಅನೇಕ ವರ್ಷಗಳಿಂದ ಆಗಾಗ ನಡೆಯುತ್ತಿದೆ. ಗಂಭೀರತೆ ಇಲ್ಲದೇ ಆಗಾಗ ನಡೆಸುವ ಇಂತಹ ಹೋರಾಟಗಳಿಂದ, ಅದರಲ್ಲಿ ಭಾಗವಹಿಸುವುದರಿಂದ ಯಾವ ಪರಿಣಾಮ ಉಂಟಾಗಲು ಸಾಧ್ಯ ಎಂಬ ಚರ್ಚೆ ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲೇ ನಡೆಯುತ್ತಿರುವುದು ಕೇಳಿ ಬಂತು.