ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಐಕ್ಯೂಎಸಿ ಕೊಠಡಿಯಲ್ಲಿ ಕಾಲೇಜಿನ ಮಹತ್ವಾಕಾಂಕ್ಷಿ ಯೋಜನೆಯಾದ ವಿದ್ಯಾಸಂಜೀವಿನಿ ಘಟಕದ ವತಿಯಿಂದ ಬಿ.ಎಸ್ಸಿ ಪದವಿಯಲ್ಲಿ ಅಭ್ಯಸಿಸುತ್ತಿರುವ ಪ್ರತಿಭಾವಂತ , ಬಡ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುವ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಆಯ್ದ ಪ್ರತಿಭಾವಂತ 10 ವಿದ್ಯಾರ್ಥಿಗಳಿಗೆ ಧನಸಹಾಯವನ್ನು ಮಾಡಲಾಯಿತು. ಎಸ್.ಡಿ.ಎಂ.ಕಾಲೇಜಿನ ಪೂರ್ವ ವಿದ್ಯಾರ್ಥಿ ಈಗ ಅಬುಧಾಬಿಯಲ್ಲಿ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರಕಾಶ್ ಕಾಮತ್ ತಾನು ಕಲಿತ ಕಾಲೇಜಿಗೆ ಸಹಾಯವನ್ನು ಮಾಡಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಧನಸಹಾಯವನ್ನು ಮಾಡಿದ್ದಾರೆ. ಒಟ್ಟು 50 ಸಾವಿರ ರೂಪಾಯಿ ಹಣವನ್ನು ವಿದ್ಯಾರ್ಥಿಗಳಿಗೆ ದೇಣಿಗೆ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಧನಸಹಾಯ ನೀಡಿದ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ಕಾಮತ್ ತಾವು ಕಾಲೇಜಿಗೆ ಬರುವಾಗ ಅನುಭವಿಸಿದ ಕಷ್ಟದ ದಿನಗಳನ್ನು ಮೆಲುಕು ಹಾಕಿದರು. ನಾನು ಕಲಿತ ಕಾಲೇಜಿಗೆ ಹಣವನ್ನು ನೀಡಬೇಕು. ನೀಡಿದ ಹಣದ ಸದ್ವಿನಿಯೋಗ ಆಗಬೇಕು ಅನ್ನುವ ಇಚ್ಛೆ, ಹಣವನ್ನು ನೀಡಿದವರಿಗೆ ಇರುತ್ತದೆ. ಆದರೆ ಎಸ್.ಡಿ.ಎಂ. ಕಾಲೇಜಿನ ಆಡಳಿತ ಮಂಡಳಿಗೆ ಹಣವನ್ನು ನೀಡಿದರೆ ಹಣ ಸದ್ವಿನಿಯೋಗ ಆಗುತ್ತದೆ. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಹಣದ ಸಮಸ್ಯೆ ಹೆಚ್ಚು ಇರುತ್ತದೆ. ಅಂತಹವರಿಗೆ ಮುಂದೊಂದು ದಿನ ನೀವು ಸಹಾಯ ಮಾಡುವಂತೆ ಆಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಹೊನ್ನಾವರದ ಜೀವವಿಮಾ ನಿಗಮದ ಡೆವಲಪ್ಮೆಂಟ್ ಆಫೀಸರ್ ಸತೀಶ್ ಭಟ್ ಮಾತನಾಡಿ ಕಠಿಣ ಪರಿಸ್ಥಿತಿ ಇದ್ದರೆ ನಾವು ಏನನ್ನಾದರೂ ಸಾಧಿಸಬಹುದು. ಕಠಿಣ ಪರಿಸ್ಥಿತಿಯಲ್ಲಿ ನಾವು ಸಾಧಿಸಬೇಕೆಂಬ ಛಲ ಬೆಳೆಯುತ್ತದೆ ಎಂದರು. ಅಲ್ಲದೆ ಧನ ಸಹಾಯ ಪಡೆದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಕಾರ್ಯಕ್ರಮದ ಅತಿಥಿ ಆನಂದ ಅರ್ವಾರೆ ಮಾತನಾಡುತ್ತಾ ವಿದ್ಯಾರ್ಥಿಗಳು ವೇದ ಪುರಾಣಗಳ ಬಗ್ಗೆ ತಿಳಿದಿಟ್ಟುಕೊಂಡಿರಬೇಕು. ಅಲ್ಲದೆ ಸಂಸ್ಕಾರದ ಬಗ್ಗೆ ತಿಳಿದಿಟ್ಟುಕೊಂಡಿರಬೇಕು. ಅಂಕಗಳಿಗಾಗಿ ಓದಬೇಡಿ , ಗಮನಾರ್ಹ ಸಾಧನೆ ಮಾಡಲು ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಯವನ್ನು ವ್ಯರ್ಥ ಮಾಡಬೇಡಿ, ಓದುವ ಗುಣವನ್ನು ಹೆಚ್ಚು ಬೆಳೆಸಿಕೊಳ್ಳಿ , ಪಾಲಕರ ಬೆವರಿನ ಹನಿಯ ಮಹತ್ವವನ್ನು ತಿಳಿದುಕೊಳ್ಳಿ ಎಂದು ಕಾಲೇಜಿನ ಪ್ರಾಂಶುಪಾಲ ಸಂಜೀವ್ ನಾಯ್ಕ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಪಿ.ಇ.ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಆರ್ಥಿಕ ಸಮಸ್ಯೆ ಕಾರಣದಿಂದ ಯಾರೂ ಸಹ ವಿದ್ಯೆಯಿಂದ ವಂಚಿತರಾಗಬಾರದು. ಇಲ್ಲಿನ ಫಲಾನುಭವಿ ವಿದ್ಯಾರ್ಥಿಗಳು ಈ ಯೋಜನೆ ಉದ್ದೇಶ ತಿಳಿದಿಟ್ಟುಕೊಂಡಿರಬೇಕು. ಅಲ್ಲದೆ ಈ ಯೋಜನೆ ಬಗ್ಗೆ ಬೇರೆ ವಿದ್ಯಾರ್ಥಿಗಳಿಗೂ ತಿಳಿಸುವಂತಾಗಬೇಕು. ಅಲ್ಲದೆ ವಿದ್ಯಾರ್ಥಿಗಳು ಧನ್ಯವಾದ ಹೇಳುವ ಮತ್ತು ಹಿರಿಯರಿಗೆ ಗೌರವಿಸುವ ಗುಣ ಬೆಳೆಸಿಕೊಳ್ಳಲು ಕರೆ ನೀಡಿದರು.
ವಿದ್ಯಾಸಂಜೀವಿನಿ ಘಟಕದ ಕೊ ಆರ್ಡಿನೇಟರ್ ಎಚ್.ಟಿ.ಅರ್ವಾರೆ, ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸೆಲೆನ್ಸ್ & ರಿಸರ್ಚ್ ಡೈರೆಕ್ಟರ್ ಡಾ.ಶಿವರಾಮ್ ಶಾಸ್ತ್ರಿ, ಕೋ ಆರ್ಡಿನೇಟರ್ ಪ್ರಸಾದ್ ಹೆಗಡೆ , ಈ ವೇಳೆ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ನಾಗರಾಜ್ ಹೆಗಡೆ ಅಪಗಾಲ್ ನಿರೂಪಿಸಿದರು. ಉಪನ್ಯಾಸಕ ರೋಹಿತ್ ಡಿಸಿಲ್ವಾ ವಂದಿಸಿದರು.