ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಿಂದ ಅತ್ತಿವೇರಿ ಪಕ್ಷಿಧಾಮಕ್ಕೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿ ಹೊಂಡಗಳು ಬಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಈ ಮಾರ್ಗದ ರಸ್ತೆಯಲ್ಲಿ ಓಡಾಡಲಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇಲಾಖೆಯ ಅಧಿಕಾರಿಗಳಿಗೆ ಗ್ರಾಮದಲ್ಲಿರುವ ರಸ್ತೆ ಕಾಣದೆ ಇರುವುದು ಇಲ್ಲಿಯ ಅವ್ಯವಸ್ಥೆಗೆ ಕಾರಣವಾಗಿದೆ.
ಪಟ್ಟಣ ದಿಂದ ಕೇವಲ 12 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಅದೆಷ್ಟೋ ವರ್ಷ ಕಳೆದರೂ ಇಲ್ಲಿ ಹಲವು ಬಡಾವಣೆಗಳ ಹಾಗೂ ರಾಜ್ಯದಲ್ಲಿಯೆ ಸುಪ್ರಸಿದ್ಧ ಪಡೆದ ಅತ್ತಿವೇರಿ ಪಕ್ಷಿಧಾಮಕ್ಕೆ ತೆರಳುವ ರಸ್ತೆಗಳು ಸುಧಾರಣೆ ಕಾಣದೆ ಇರುವುದು ಇಲ್ಲಿ ಓಡಾಡುವ ವಾಹನ ಸವಾರರು,ಸಾರ್ವಜನಿಕರ ಹಾಗೂ ಪ್ರವಾಸಿಗರ ನಿದ್ದೆಗೆಡಸಿದೆ. ಆಸ್ಪತ್ರೆಗೆ ಹೋಗಲು ರೋಗಿಗಳು ಹಿಂದೇಟು: ಅತ್ತಿವೇರಿಗೆ ಹೋಗುವ ರಸ್ತೆಯು ಸರ್ಕಾರಿ ಆಸ್ಪತ್ರೆಯ ಮುಂದೆ ಹಾದು ಹೋಗಿದ್ದು ಇಲ್ಲಿ ಅಗಡಿ, ನಂದಿಕಟ್ಟಾ, ಹುನಗುಂದ, ಅತ್ತಿವೇರಿ, ಅರಶೀಣಗೇರಿ, ಬಸ್ಸಾಪೂರ, ಸೇಲಂ ನಗರ ಸೇರಿದಂತೆ ಹಲವು ಗ್ರಾಮಗಳ ರೋಗಿಗಳು ಇದೆ ಮಾರ್ಗವಾಗಿ ಓಡಾಡಬೇಕಾದರೆ ಗುಂಡಿ ಬಿದ್ದ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬಂದು ಚಿಕಿತ್ಸೆ ಕೊಡುವಷ್ಟರಲ್ಲಿ ರೋಗಿಗಳಿಗೆ ನೇರವಾಗಿ ತಾಲೂಕು ಆಸ್ಪತ್ರೆಗೆ ಅಥವಾ ಹುಬ್ಬಳ್ಳಿಯ ಕಿಮ್ಸಗೆ ರವಾನಿಸಬೇಕಾಗುವಂತ ಪರಿಸ್ಥಿತಿ ಇಲ್ಲಿದೆ.
ಪ್ರವಾಸಿಗರಿಗೆ ಕಿರಿಕಿರಿಯಾದ ಹೊಂಡಗಳ ರಸ್ತೆ: ಪಕ್ಷಿಧಾಮಕ್ಕೆ ಬರಲು ಹಿಂದೇಟು: ಕಾರವಾರ, ಯಲ್ಲಾಪುರ, ಅಂಕೋಲಾ, ಕಲಘಟಗಿ, ದಾಂಡೇಲಿ ಬೆಳಗಾಂವ, ಹಳಿಯಾಳ ಹಾಗೂ ಗೋವಾ, ಮಹಾರಾಷ್ಟ್ರಗಳಿಂದ ಅತ್ತಿವೇರಿ ಪಕ್ಷೀಧಾಮಕ್ಕೆ ವಿವಿಧ ದೇಶಗಳಿಂದ ಬರುವ ಪಕ್ಷಿಗಳನ್ನು ನೋಡಲು ಹಾಗೂ ಜಲಾಶಯಕ್ಕೆ ಬಂದು ಹೋಗುವ ಪ್ರವಾಸಿಗರು ಇಲ್ಲಿನ ಗುಂಡಿಗಳನ್ನು ನೋಡಿ ಇದು ಯಾವುದೋ ಕೆರೆಗೊ ಗದ್ದೆಗೆ ಹೋಗುವ ರಸ್ತೆ ಇರಬಹುದು ಎಂದು ಭಾವಿಸಿ ತಮ್ಮ ವಾಹನವನ್ನು ವಾಪಸ್ಸು ಹಿಂತಿರುಗಿಸಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.
ಕಣ್ಣಿದ್ದು ಕುರುಡರಾದ ಅಧಿಕಾರಿಗಳು, ರಾಜಕಾರಣಿಗಳು: ಹುನಗುಂದ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು ೩೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ ಎಂದು ತಿಳಿದ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಆಲೀಸದೆ ತಿಳಿಯದೆ ಇಲ್ಲಿನ ಜನರು ಓಡಾಡುವ ಬಗ್ಗೆ ಹಾಗೂ ರೋಗಿಗಳ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ಮಾಡದೆ ಇರುವುದು ವಿಪರ್ಯಾಸವೆ ಸರಿ. ಇನ್ನೂ ಚುನಾವಣೆ ಬಂದಾಗ ಜನರಲ್ಲಿ ಮತಕ್ಕಾಗಿ ಕೈಚಾಚಿ ಕಾಲು ಬಿದ್ದು ಗೆದ್ದು ಹೋಗಿ ಅಧಿಕಾರ ವಹಿಸಿಕೊಂಡಿರುವ ಜಿ.ಪಂ, ತಾ.ಪಂ, ಎಮ್ ಪಿ, ಎಮ್ ಎಲ್ ಎ ಗಳು ಇಲ್ಲಿ ಜನರ ಸಮಸ್ಯ ಪ್ರಯತ್ನ ಮಾಡದೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಈಗಾಗಲೇ ರಸ್ತೆಗಳ ಹಾನಿಯಾದ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ದುರಸ್ಥಿ ಹಾಗೂ ಹೊಸ ರಸ್ತೆ ಮಾಡುವ ಬಗ್ಗೆ ಅನುದಾನಕ್ಕೆ ಪತ್ರ ಬರೆಯಲಾಗಿದೆ ಆದಷ್ಟು ಬೇಗ ಹಣ ಬಂದರೆ ರಸ್ತೆ ನಿರ್ಮಾಣದ ಅಥವಾ ದುರಸ್ಥಿ ಕೆಲಸ ಮಾಡಲಾಗುವುದು.
ಪ್ರದೀಪ್ ಭಟ್, ಜಿಲ್ಲಾ ಪಂಚಾಯತ ಎಂಜಿನಿಯರ್