ಗೋಕರ್ಣ: ಗಂಗಾವಳಿ ನದಿಯುದ್ದಕ್ಕೂ ಅಕ್ರಮ ಮರಳುಗಾಳಿಕೆ ನಡೆಯುತ್ತಿದ್ದು, ಚುನಾವಣೆಯ ಬಿಗಿ ವಾತಾವರಣವಿದ್ದರೂ ಕೂಡ ರಾಜಾರೋಶವಾಗಿ ಸಾಗಾಟ ಮಾಡುತ್ತಿರುವದನ್ನು ನೋಡಿದರೆ ಸಂಬ0ಧಪಟ್ಟ ಎಲ್ಲ ಅಧಿಕಾರಿಗಳ ಶಾಮೀಲಾತಿ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಇಲಾಖೆಯವರು ಕೂಡ ಶಾಮೀಲಾಗಿರುವುದರಿಂದಲೇ ಇಂತಹ ಅಕ್ರಮ ಮರಳು ದಂಧೆ ಸಕ್ರಮದಂತೆ ನಡೆಯುತ್ತಿದೆ ಎಂದು ನದಿಯಂಚಿನ ಜನರು ಕಣ್ಣೀರು ಹಾಕುತ್ತಿದ್ದಾರೆ. ಈ ಮರಳು ನದಿಯಿಂದ ತೆಗೆಯುವುದರಿಂದ ಚಿಪ್ಪೆಕಲ್ಲು, ಕಲ್ಗ ಸಂತತಿ ನಾಶವಾಗುತ್ತಿದೆ. ಪ್ರತಿದಿನ ನೂರಾರು ವಾಹನಗಳಲ್ಲಿ ಸಾಗಾಟ ಮಾಡುವ ವ್ಯವಸ್ಥಿತ ಸಂಘಟನೆಯಿದ್ದು, ಕೆಲವು ಭಾಗಗಳನ್ನು ಅವರವರು ಹಂಚಿಕೊ0ಡಿದ್ದಾರೆ. ಯಾರೇ ಅಧಿಕಾರಿಗಳು ಬಂದರೂ ಇವರೆಲ್ಲರೂ ಒಟ್ಟಾಗಿ ಅವರೊಂದಿಗೆ ಕುಳಿತು ವ್ಯವಹಾರ ಕುದುರಿಸುತ್ತಾರೆ ಎಂದು ಆರೋಪ ಜನಸಾಮಾನ್ಯರಿಂದಲೂ ಕೇಳಿಬರುತ್ತಿದೆ.
ಚುನಾವಣೆಯ ಸಂದರ್ಭದಲ್ಲಿಯಾದರೂ ಈ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಬೀಳಬಹುದು ಎಂದು ಜನರು ಅಂದುಕೊ0ಡಿದ್ದರು. ಆದರೆ ಇವರಿಗೆ ಯಾರೇ ಬಂದರೂ ಕೂಡ ಮುಲಾಜಿಲ್ಲದೇ ತಮ್ಮ ದಂಧೆಯನ್ನು ಮುಂದುವರೆಸಿಕೊ0ಡು ಹೋಗಿದ್ದಾರೆ. ಗಂಗಾವಳಿ ನದಿಯಲ್ಲಿ ಸಮುದ್ರದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಕೆಲವು ಸೂಕ್ಷö್ಮ ಮೀನುಗಳು ಕೂಡ ಇಲ್ಲಿ ವಾಸ ಮಾಡುತ್ತವೆ. ಹಾಗೇ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ ಮರಳು ಗಣಿಗಾರಿಕೆ ಇವೆಲ್ಲವನ್ನು ನುಂಗಿ ಹಾಕುತ್ತಿದೆ. ಅಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದರಿಂದ ಕೆಲವರು ಅಧಿಕಾರಿಗಳ ಬಳಿ ದೂರಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.