ಯಲ್ಲಾಪುರ: ತಾಲೂಕಿನ ಬಾಸಲದಲ್ಲಿ ಮೃತಮಟ್ಟ ಅನಾಥ ವೃದ್ಧನೋರ್ವನ ಅಂತ್ಯ ಸಂಸ್ಕಾರವನ್ನು ಮಾವಿನಮನೆ ಗ್ರಾಮ ಪಂಚಾಯಿತಿಯವರೇ ನೆರವೇರಿಸುವ ಮೂಲಕ ಮಾನವೀಯತೆ ಮೆರೆದರು.
ಬಾಸಲ ಗ್ರಾಮದ ಕಪ್ಪುಸ್ವಾಮಿ ವೀರಣ್ಣ ಅಳಂದರೆ (ರಾಯಪ್ಪ ಬಾಸಲ) ವಯೋಸಹಜ ಅನಾರೋಗ್ಯದಿಂದ ಸೋಮವಾರ ಸಂಜೆ ನಿಧನರಾದರು. ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ಬಾಸಲದಲ್ಲಿ ಸುಮಾರು 25 ವರ್ಷಗಳಿಂದ ಕೂಲಿ ಕೆಲಸ ಮಾಡುತ್ತ ಒಂಟಿಯಾಗಿ ಜೀವನ ನಡೆಸುತ್ತಿದ್ದರು. 90 ವರ್ಷದ ರಾಯಪ್ಪ ನಿಧನರಾದಾಗ ಅಂತ್ಯಸಂಸ್ಕಾರ ನೆರವೇರಿಸಲೂ ಕುಟುಂಬವರ್ಗದವರು, ಸಂಬಂಧಿಕರು ಇಲ್ಲದೇ ಇರುವ ಕಾರಣಕ್ಕೆ ಗ್ರಾಮ ಪಂಚಾಯಿತಿಯವರೇ ಅದಕ್ಕೆ ಮುಂದಾಗಿದ್ದಾರೆ.
ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಕಳಿ, ಸದಸ್ಯ ಮಾಚಣ್ಣ ಹಲಗುಮನೆ, ಪಿಡಿಒ ಗಂಗಾಧರ ಭಟ್ಟ ಅವರು ಪೊಲೀಸರಿಗೆ ಮಾಹಿತಿ ನೀಡಿ, ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.
ಸ್ಥಳೀಯರಾದ ಚಂದ್ರಕಾಂತ ಮರಾಠೆ, ಮಂಜುನಾಥ ಶೆಟ್ಟಿ, ಚಂದ್ರು ಶೆಟ್ಟಿ , ಶೀನಾ ಶೆಟ್ಟಿ , ಶಿವರಾಮ ಶೆಟ್ಟಿ , ಗಿರೀಶ ವಜ್ರಳ್ಳಿ, ಮಾಬುಲಿ ವಜ್ರಳ್ಳಿ , ಜಯರಾಮ ತಳೇಕರ, ಸಂದೀಪ ಬಾಸಲ, ನಾಸಿರಾ ಬಾಸಲ, ನಾಗವೇಣಿ ಶೆಟ್ಟಿ, ಪವಿತ್ರಾ ಶೆಟ್ಟಿ, ಕುಸುಮಾ ಶೆಟ್ಟಿ, ಪಾರ್ವತಿ ಶೆಟ್ಟಿ ಇತರರು ಸಹಕರಿಸಿದರು.