ಯಲ್ಲಾಪುರ: ಶಿಷ್ಯರಿಂದ ಗುರುವಂದನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯ ಶ್ರೇಷ್ಠ ಪರಿಪಾಠ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಸೋಮವಾರ ತಾಲೂಕಿನ ಜಂಬೆಸಾಲ ಗಾಣಗದ್ದೆಯಲ್ಲಿ ಹಿರಿಯ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆ ಗೋಳಗೋಡ ಇವರಿಗೆ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗುರು-ಶಿಷ್ಯರ ಸಂಬಂಧದ ಕಲ್ಪನೆ ಅದ್ಭುತವಾದುದು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಕಲೆಯ ಪಾಠ ಮಾಡಿ ಬೆಳೆಸಿದ ಕೀರ್ತಿ ಕೆ.ಪಿ.ಹೆಗಡೆಯವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವೇ. ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಮಾತನಾಡಿ, ವಿದ್ಯೆ ಕಲಿಸಿದವರನ್ನು ಮರೆಯದೇ ಗೌರವಿಸುವುದು ಉತ್ತಮ ಶಿಷ್ಯನ ಲಕ್ಷಣ ಎಂದರು.
ಭಾಗವತ ತಿಮ್ಮಣ್ಣ ಭಾಗ್ವತ ಗಾಣಗದ್ದೆ ಅವರು ಗುರು ಕೆ.ಪಿ.ಹೆಗಡೆ ದಂಪತಿಯನ್ನು ಗೌರವಿಸಿ, ಗುರುವಂದನೆ ಸಲ್ಲಿಸಿದರು. ಪುರೋಹಿತ ವೇ.ನರಸಿಂಹ ಭಟ್ಟ ದಾಸನಜಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವದರ್ಶನ ಕಾಲೇಜಿನ ಪ್ರಾಚಾರ್ಯ ಡಾ.ದತ್ತಾತ್ರೇಯ ಗಾಂವ್ಕರ, ಪತ್ರಕರ್ತ ನರಸಿಂಹ ಸಾತೊಡ್ಡಿ, ಕಲಾವಿದರಾದ ಅನಂತ ಹೆಗಡೆ ದಂತಳಿಗೆ, ಗಣಪತಿ ಭಾಗ್ವತ ಶಿಂಬಳಗಾರ, ರಾಮಚಂದ್ರ ಭಾಗ್ವತ ಗೋಳಿಗದ್ದೆ ಮಾತನಾಡಿದರು.
ಹಿರಿಯರಾದ ವೆಂಕಟ್ರಮಣ ಭಟ್ಟ ಗುರ್ತೆಗದ್ದೆ, ನರಸಿಂಹ ಭಟ್ಟ ಕುಂಟೆಜಡ್ಡಿ, ಎಂ.ಎಸ್.ಹೆಗಡೆ, ಗಣಪತಿ ಭಾಗ್ವತ ಗಾಣಗದ್ದೆ ಉಪಸ್ಥಿತರಿದ್ದರು. ಮಹತಿ ಭಾಗ್ವತ, ಪ್ರಣವ, ಎಸ್.ಕೆ.ಭಾಗ್ವತ ನಿರ್ವಹಿಸಿದರು.