Slide
Slide
Slide
previous arrow
next arrow

ಆಧ್ಯಾತ್ಮಿಕ ತಳಹದಿ ಇಲ್ಲದ ನ್ಯಾಯ ಗಟ್ಟಿಯಾಗಿ ನಿಲ್ಲುವುದಿಲ್ಲ: ಸ್ವರ್ಣವಲ್ಲೀ ಶ್ರೀ

300x250 AD

ಬೆಳಗಾವಿ: ನೈತಿಕತೆ ಮತ್ತು ಕಾನೂನು ಎರಡೂ ಪರಸ್ಪರ ಹತ್ತಿರದ ಶಬ್ಧಗಳು. ಆಧ್ಯಾತ್ಮಿಕತೆ ಇಲ್ಲದ ನ್ಯಾಯ ಗಟ್ಟಿಯಾಗಿ ನಿಲ್ಲುವುದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನುಡಿದರು

ಭಗವದ್ಗೀತೆ ಅಭಿಯಾನದ ಅಂಗವಾಗಿ ಬೆಳಗಾವಿಯ ನ್ಯಾಯಾಲಯದ ಸಂಕೀರ್ಣದ ಸಮುದಾಯ ಭವನದಲ್ಲಿ ಶನಿವಾರ ಭಗವದ್ಗೀತೆ ಮತ್ತು ಕಾನೂನು ಎನ್ನುವ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ, ಅವರು ಆಶಿರ್ವಚನ ನೀಡುತ್ತಿದ್ದರು. ಧ್ಯಾನದ ಮೂಲಕ ಸಮಚಿತ್ತತೆಯನ್ನು ಸಾಧಿಸಿಕೊಂಡು ನ್ಯಾಯ ಪೀಠದಲ್ಲಿ ಕುಳಿತುಕೊಂಡಾಗ ಸರಿಯಾದ ನ್ಯಾಯ ನೀಡಲು ಸಾಧ್ಯ ಎಂದು ಶ್ರೀಗಳು ಹೇಳಿದರು.

ಭಗವದ್ಗೀತೆ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಧರ್ಮದ ಚಿಂತನೆಗಳೇ ಅನೇಕ ಕಾನೂನುಗಳಿಗೆ ತಳಹದಿಯಾಗಿದೆ. ಧರ್ಮ ಮತ್ತು ನ್ಯಾಯ ಪರಸ್ಪರ ಹತ್ತಿರದ ಶಬ್ದಗಳು. ಶಾಶ್ವತವಾದ ಧರ್ಮವೇ ಶಾಶ್ವತವಾದ ನ್ಯಾಯ. ಧರ್ಮ ಮತ್ತು ನ್ಯಾಯ ಒಟ್ಟಿಗೆ ಸೇರಿದಾಗ, ಆ ಮಾರ್ಗದಲ್ಲಿ ಸಾಗಿದಾಗ ಸಮಾಜದಲ್ಲಿ ಹಿತ ನೆಲೆಸುತ್ತದೆ. ಯಾವುದು ಧರ್ಮವೋ ಅದೇ ನ್ಯಾಯ, ಯಾವುದು ನ್ಯಾಯವೋ ಅದೇ ಧರ್ಮ. ಧರ್ಮ ಮತ್ತು ನ್ಯಾಯ ಒಟ್ಟಿಗೆ ಹೋದಾಗ ಇನ್ನಷ್ಟು ಗಟ್ಟಿಯಾಗಲು ಸಾಧ್ಯ ಎಂದು ಅವರು ಹೇಳಿದರು.

ಅಪರಾಧ ಮಾಡಿದ ನಂತರ ಶಿಕ್ಷೆ ವಿಧಿಸುವುದು ಕಾನೂನು. ಅಪರಾಧ ಮಾಡದಂತೆ ತಡೆಯುವುದು ಭಗವದ್ಗೀತೆ. ಅತಿಯಾದ ಆಸೆ, ದ್ವೇಷ ಅಪರಾಧಕ್ಕೆ ಕಾರಣ. ಇವುಗಳನ್ನು ಬಿಡುವುದು ಹೇಗೆ ಎನ್ನುವ ಪ್ರಶ್ನೆಗೆ ಭಗವದ್ಗೀತೆಯಲ್ಲಿ ಉತ್ತರವಿದೆ. ಇಂದ್ರೀಯಗಳ ಮೇಲೆ ಹೇಗೆ ನಿಯಂತ್ರಣ ಸಾಧಿಸಬೇಕೆನ್ನುವುದನ್ನು ಭಗವದ್ಗೀತೆ ಕಲಿಸುತ್ತದೆ ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ತಿಳಿಸಿದರು.

ರಾಮಕೃಷ್ಣಾಶ್ರಮದ ಶ್ರೀ ಮೋಕ್ಷಾತ್ಮಾನಂದಜೀ ಮಹಾರಾಜ ಮಾತನಾಡಿ, ಭಗವದ್ಗೀತೆ ಅತ್ಯಂತ ಶ್ರೇಷ್ಠವಾದ ಗ್ರಂಥ, ಶ್ರೇಷ್ಠ ಸಂದೇಶವನ್ನು ಸಾರುವ ಗ್ರಂಥ. ಶ್ರೇಷ್ಠ ಜ್ಞಾನಿಗಳನ್ನು ನೀಡಿದ್ದು ಭಗವದ್ಗೀತೆ, ಶ್ರೇಷ್ಠ ರಾಜರನ್ನು ನೀಡಿದ್ದು ಭಗವದ್ಗೀತೆ, ಶ್ರೇಷ್ಠ ನ್ಯಾಯವಾದಿಗಳನ್ನು ನೀಡಿದ್ದು ಭಗವದ್ಗೀತೆ ಹಾಗೆಯೇ ಶ್ರೇಷ್ಠ ಸಂತರನ್ನು ಸೃಷ್ಟಿ ಮಾಡಿದ್ದು ಭಗವದ್ಗೀತೆ. ಈ ಜಗತ್ತಿನಲ್ಲಿ ಶ್ರೇಷ್ಠವಾದದ್ದೆಲ್ಲ ಸೃಷ್ಠಿಯಾಗಿದ್ದು ಭಗವದ್ಗೀತೆಯಿಂದಲೇ. ಭಗವದ್ಗೀತೆ ಶಾಂತಿಯ ಸಂದೇಶ‌ ನೀಡುತ್ತದೆ. ಹಾಗಾಗಿ ಭಗವದ್ಗೀತೆಯ ಸಂದೇಶವನ್ನು ಸಾರುವುದಕ್ಕಿಂತ ಬೇರೆ ಪವಿತ್ರ ಕಾರ್ಯವಿಲ್ಲ ಎಂದರು.

ಪಾಪ ಮಾಡಲು ಯಾರಿಗೂ ಇಷ್ಟವಿಲ್ಲ. ಆದರೆ ಕಾಮ ಮತ್ತು ಕ್ರೋಧದಿಂದ ಮನುಷ್ಯ ತಪ್ಪು ಮಾಡುತ್ತಾನೆ. ಇವೆರಡೂ ನಮ್ಮ ವೈರಿಗಳು. ದುರಾಸೆಯನ್ನು ಎಂದಿಗೂ ತೃಪ್ತಿ ಪಡಿಸಲಾಗದು. ಯಾವುದು ಸ್ವಾರ್ಥವೋ ಅದು ಅನೀತಿ, ಯಾವುದು ನಿಸ್ವಾರ್ಥವೋ ಅದು ನೀತಿ. ಆತ್ಮದಲ್ಲಿ ಮನಸ್ಸನ್ನಿಟ್ಟು ಕೆಲಸ ಮಾಡಿದರೆ ಮನುಷ್ಯ ತಪ್ಪು ಮಾಡುವುದಿಲ್ಲ. ಆದ್ಯಾತ್ಮವಿಲ್ಲದೆ ನೈತಿಕತೆ ಇಲ್ಲ ಎಂದು ಅವರು ಹೇಳಿದರು.

ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಮತ್ತು ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ದಿನೇಶಕುಮಾರ ಮಾತನಾಡಿ, ಭಗವದ್ಗೀತೆ ಮತ್ತು ಕಾನೂನು ಅವಿನಾಭಾವ ಸಂಬಂಧ ಹೊಂದಿವೆ. ಇದು
ಬಹಳ ಗಹನವಾದ ವಿಷಯವಾಗಿದ್ದು, ವಿಶೇಷವಾದ ಜ್ಞಾನ ಇದ್ದಾಗ ಮಾತ್ರ ಭಗವದ್ಗೀತೆಯ ಮಹತ್ವವನ್ನು ಅರಿಯಲು ಸಾಧ್ಯವಿದೆ. ಜಾಗತಿಕ ವ್ಯವಸ್ಥೆಯೇ ಭಗವದ್ಗೀತೆಯ ಸಾರದ ಮೇಲೆ ನಿಂತಿದೆ. ಹಾಗಾಗಿ ಭಗವದ್ಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

300x250 AD

ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಅವರು ಮಾತನಾಡಿ, ಧರ್ಮ ಮತ್ತು ಕಾನೂನು ಎರಡೂ ಪದಗಳ ಅರ್ಥ ಒಂದೇ. ಭಗವದ್ಗೀತೆಯ ಸಾರ ಮತ್ತು ಕಾನೂನಿನ ಅಂತಃಸತ್ವ ಎರಡೂ ಒಂದೇ ಆಗಿದೆ. ಎಲ್ಲ ಸಂದೇಹಗಳಿಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ ಎಂದು ಹೇಳಿದರು.
ಭಗವದ್ಗೀತೆಯನ್ನು ಉಲ್ಲೇಖಿಸಿ ನ್ಯಾಯಾಲಯಗಳು ತೀರ್ಪು ನೀಡಿದ್ದನ್ನು ಉದಾಹರಣೆ ಸಹಿತ ಅವರು ವಿವರಿಸಿದರು.

ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಅರವಿಂದ ಪಾಶ್ಚಾಪುರೆ ಮಾತನಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವಿಜಯಲಕ್ಷ್ಮೀ ವೇದಿಕೆಯಲ್ಲಿದ್ದರು. ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟಯ, ಹಲವಾರು ನ್ಯಾಯಾಧೀಶರು, ನ್ಯಾಯವಾದಿಗಳು ಉಪಸ್ಥಿತರಿದ್ದರು.

ಸದಾಶಿವ ಹಿರೇಮಠ ಸ್ವಾಗತಿಸಿದರು. ಎಂ.ಬಿ.ಜಿರಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಟಿ.ಹೆಗಡೆ ದಂಪತಿ ಮತ್ತು ಆರ್.ಪಿ.ಪಾಟೀಲ ದಂಪತಿ ಫಲಸಮರ್ಪಣೆ ಮಾಡಿದರು. ರಾಜೇಶ್ವರಿ ಕಾಪ್ಸೆ ಮತ್ತು ಪ್ರತಿಮಾ ಜೋಶಿ ಧ್ಯಾನ ಶ್ಲೋಕ ಹಾಡಿದರು. ಗೀತಾ ಹೆಗಡೆ ಸಂಗಡಿಗರು ಶ್ಲೋಕ ಪಠಣ ಮಾಡಿದರು. ಗುರುನಾಥ ಕೋರಿ ಮತ್ತು ಪೂರ್ಣಿಮಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಚಿನ ಶಿವಣ್ಣವರ ವಂದಿಸಿದರು.

ಭಗವದ್ಗೀತೆ ಮತ್ತು ಕಾನೂನು ಇವೆರಡರ ಆಶಯ ಒಂದೇ ಆಗಿದೆ :

ಭಗವದ್ಗೀತೆ ಮತ್ತು ಕಾನೂನಿಗೆ ಒಳಗಿನ ಸಂಬಂಧವೂ ಇದೆ, ಹೊರಗಿನ ಸಂಬಂಧವೂ ಇದೆ. ಭಗವದ್ಗೀತೆಯ ಆಶಯ ಮತ್ತು ಕಾನೂನಿನ ಆಶಯ ಎರಡೂ ಒಂದೇ. ಪ್ರಾಚೀನ ಕಾಲದಲ್ಲಿ ಧರ್ಮಶಾಸ್ತ್ರ ಮತ್ತು ಕಾನೂನು ಒಂದೇ ಆಗಿತ್ತು. ಅನೇಕ ಕಾನೂನುಗಳು ಧರ್ಮದ ಮೂಲದಿಂದಲೇ ಬಂದಿವೆ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚಿಸುವಾಗ ಧರ್ಮ ಶಾಸ್ತ್ರವನ್ನು ಸಹ ಚರ್ಚೆಗೊಳಪಡಿಸಲಾಗಿತ್ತು. ಅದರಲ್ಲಿಯ ಹಲವು ಅಂಶಗಳನ್ನು ಸಹ ಸಂವಿಧಾನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಹೇಳಿದರು.

Share This
300x250 AD
300x250 AD
300x250 AD
Back to top