Slide
Slide
Slide
previous arrow
next arrow

ಅರಣ್ಯಭೂಮಿ ಹಕ್ಕು ಸಿಗುವ ಕಾಲ ಸನ್ನಿಹಿತ; ಕಾಗೋಡು ತಿಮ್ಮಪ್ಪ

300x250 AD

ಕಸ್ತೂರಿ ರಂಗನ್ ವರದಿ ವಿರೋಧ ಬೃಹತ್ ಜಾಥಾ ಯಶಸ್ವಿ – 7 ಸಾವಿರಕ್ಕೂ ಅಧಿಕ ಅತಿಕ್ರಮಣದಾರರು ಭಾಗಿ

ಶಿರಸಿ: ಯಾವ ಕಾರಣಕ್ಕೂ ಜಿಲ್ಲೆಯ ಅತಿಕ್ರಮಣದಾರರು ಭಯಪಡುವ ಅಗತ್ಯವಿಲ್ಲ. ಅರಣ್ಯಭೂಮಿಯ ಹಕ್ಕು ಅತಿಕ್ರಮಣದಾರರಿಗೆ ಸಿಗುವ ಕಾಲ ಸನ್ನಿಹಿತವಾಗಿದೆ ಎಂದು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದರು.

ಶನಿವಾರ ನಗರದಲ್ಲಿ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ವತಿಯಿಂದ ಜಿಲ್ಲೆಯಲ್ಲಿ ಅರಣ್ಯದಂಚಿನ ಹಳ್ಳಿಗಳ ನಿವಾಸಿಗಳಲ್ಲಿ ಆತಂಕ ಮೂಡಿಸಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ, ಹಮ್ಮಿಕೊಂಡ ಜಾಥಾ ಹಾಗೂ ಮಹಾ ಸಮಾವೇಶದ ಕಾರ್ಯಕ್ರಮದಲ್ಲಿ ಡೊಳ್ಳು ಬಾರಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳ ಪರವಾಗಿ ಸುಧೀರ್ಘ ಅವಧಿಯಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಕಾರ್ಯ ಶ್ಲಾಘನೀಯ. ಕಸ್ತೂರಿ ರಂಗನ್ ವರದಿ ತಿರಸ್ಕಾರಗೊಳ್ಳಲಿದೆ ಎಂದ ಅವರು, ಅತಿಕ್ರಮಣದಾರರು ಧೈರ್ಯದಿಂದ ಇರುವಂತೆ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರವೀಂದ್ರ ನಾಯ್ಕ ಹೋರಾಟವನ್ನು ಮೆಚ್ಚಲೇಬೇಕು. ಅರಣ್ಯ ಅತಿಕ್ರಮಣದಾರರ ಪರವಾಗಿ ಕಾನೂನಾತ್ಮಕವಾಗಿ ಹಾಗೂ ಇಲಾಖೆ ಹಂತದಲ್ಲಿ ಸಮಸ್ಯೆಗೆ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿರುವುದು ಶ್ಲಾಘನೀಯ ಸಂಗತಿ ಎಂದರು.

ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ಜನತೆ ಬಹಳ ತೊಂದರೆ ಅನುಭವಿಸುವಂತಾಗುತ್ತದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕಸ್ತೂರಿ ರಂಗನ್ ವರದಿಯನ್ನು ವಾಪಸ್ ಕಳುಹಿಸಬೇಕು. ಈ ಬಗ್ಗೆ ಸರಕಾರಕ್ಕೆ ಒತ್ತಡ ತರುತ್ತೇವೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು. ಅದು ಜಾರಿಯಾದರೆ ಎಲ್ಲ ಕೆಲಸಗಳಿಗೂ ಅಡ್ಡಿಯಾಗಲಿದೆ. ಅತಿಕ್ರಮಣದಾರರಿಗೆ ಶಕ್ತಿ ನೀಡುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡಲಿದೆ ಎಂದರು.

ಶಾಸಕ ಸತೀಶ ಸೈಲ್ ಮಾತನಾಡಿ, ಅತಿಕ್ರಮಣದಾರರಿಂದ ಅರಣ್ಯ ಉಳಿದಿದೆಯೇ ಹೊರತು, ಕೇವಲ ಅರಣ್ಯ ಇಲಾಖೆಯ ಅಧಿಕಾರಿಗಳಿಂದಲ್ಲ. ಕೇಂದ್ರ ಸರ್ಕಾರ ಅತಿಕ್ರಮಣದಾರರ ಸಮಸ್ಯೆಗೆ ಸ್ಪಂದಿಸಬೇಕು ಹಾಗೂ ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ, ಕಾರವಾರ ಶಾಸಕ ಸತೀಶ ಸೈಲ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ವಸಂತ ನಾಯ್ಕ, ರಾಮಾ ಮೊಗೇರ ಮುಂತಾದವರು ಪಾಲ್ಗೊಂಡರು. ಭಿಮ್ಸಿ ವಾಲ್ಮೀಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ದೇವರಾಜ ಮರಾಠಿ ಬಂಡಲ, ಲಕ್ಷ್ಮಣ ಮಾಳ್ಳಕ್ಕನವರ ಶಿರಸಿ, ಜಿ.ಎಮ್ ಶೆಟ್ಟಿ ಅಂಕೋಲಾ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಸುರೇಶ್ ಮೇಸ್ತ ಹೊನ್ನಾವರ, ದಿನೇಶ್ ನಾಯ್ಕ ಸಂಪಖಂಡ, ರಾಜೇಶ್ ಮಿತ್ರ ನಾಯ್ಕ ಅಂಕೋಲಾ, ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ರಾಘು ಕವಂಚೂರು, ಸುನೀಲ್ ನಾಯ್ಕ ಸಂಪಖಂಡ, ದಿನೇಶ ನಾಯ್ಕ ಮುಂತಾದವರು ವಿವಿಧ ಜವಾಬ್ದಾರಿ ನಿರ್ವಹಿಸಿದರು.

300x250 AD

ಸಹಸ್ರಾರು ಜನರ ಸಮ್ಮುಖದಲ್ಲಿ ಬೃಹತ್ ಜಾಥಾ:

ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ನೇತೃತ್ವದಲ್ಲಿ ಶ್ರೀ ಮಾರಿಕಾಂಬಾ ದೇವಾಲಯದ ಆವರಣದಿಂದ ಪ್ರಾರಂಭವಾದ ಜಾಥಾ ಜನ ಜಾತ್ರೆಯಂತೆ ಕಂಡು ಬಂತು. ಸಿದ್ಧಿ ಧಮಾಮಿ ಕುಣಿತ, ಲಮಾಣಿ ನೃತ್ಯ, ಗೌಳಿ ನೃತ್ಯ, ಡೊಳ್ಳು ಕುಣಿತ, ಧಮಾಮಿ, ಹಾಲಕ್ಕಿ, ಗುಮ್ಮಟಿ ಪಾಂಗ್ ಇನ್ನಿತರ ಜಾನಪದ ತಂಡದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪೊಲೀಸ್ ಮೈದಾನದಲ್ಲಿ ಬೃಹತ್ ಸಭೆ ನಡೆಸುವ ಮೂಲಕ ಅಂತ್ಯಗೊಂಡಿತು.

ಸಭೆಯಲ್ಲಿ‌ ಕಿಕ್ಕಿರಿದ ಅತಿಕ್ರಮಣದಾರರು:
ನಗರದಲ್ಲಿ ನಡೆದ ಐತಿಹಾಸಿಕ ಜಾಥಾ ಹಾಗೂ ಬೃಹತ್ ಸಭೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಿಲ್ಲೆಯ ಸಾವಿರಾರು ಹಳ್ಳಿಗಳ ಅತಿಕ್ರಮಣದಾರರು ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿಸುವ ಸಾರ್ವಜನಿಕರು ಪಾಲ್ಗೊಂಡು, ವಿರೋಧದ ಧ್ವನಿ ಮೊಳಗಿಸಿದರು.

ಅಧಿವೇಶನದಲ್ಲಿ ಚರ್ಚಿಸಿ:
ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲದಿಂದ 5 ಸಾವಿರಕ್ಕಿಂತ ಹೆಚ್ಚು ಹೋರಾಟವನ್ನು ಮಾಡಿದ್ದೇವೆ. ಆದರೂ ನಮ್ಮ ಹೋರಾಟಕ್ಕೆ ಜಯ ದೊರೆಯಲಿಲ್ಲ. ಕಾನೂನು ಅರಣ್ಯ ವಾಸಿಗಳ ಪರವಾಗಿದೆ. ಸರ್ಕಾರ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆಗುವ ದೌರ್ಜನ್ಯ ನಿಲ್ಲಬೇಕು. ಯಾವ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಗೆ ತರಬಾರದು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು.
– ರವೀಂದ್ರ ನಾಯ್ಕ (ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ)


ಅರಣ್ಯ ಉಳಿಸುವಲ್ಲಿ ಇಲಾಖೆಯ ಪಾತ್ರ ಮಾತ್ರ ಇಲ್ಲ. ಅದರಲ್ಲಿ ಅರಣ್ಯವಾಸಿಗಳ ಪ್ರಯತ್ನವೂ ಇದೆ. ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಅರಣ್ಯ ಸಚಿವರೊಂದಿಗೆ ಸಭೆ ನಡೆಸಿ, ಸೂಕ್ತ ಪರಿಹಾರ ದೊರಕಿಸುವುದಕ್ಕೆ ಪ್ರಯತ್ನಿಸುತ್ತೇನೆ.

  • ಸತೀಶ ಜಾರಕಿಹೊಳಿ (ಲೋಕೋಪಯೋಗಿ ಇಲಾಖೆ ಸಚಿವ)
Share This
300x250 AD
300x250 AD
300x250 AD
Back to top