Slide
Slide
Slide
previous arrow
next arrow

ಡಿ.3ಕ್ಕೆ ಶಿರಸಿಯಲ್ಲಿ ‘ಶಕ್ತಿ ಸಂಚಯ’ ಜಾಗೃತ ಮಹಿಳಾ ಸಮಾವೇಶ

300x250 AD

ಶಿರಸಿ: ಅಕ್ಷಯ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಡಿ. 3 ರಂದು ರವಿವಾರ ಬೆಳಿಗ್ಗೆ 9-00 ಗಂಟೆಯಿಂದ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಶಿರಸಿ ವಿಭಾಗದ ಶಕ್ತಿ ಸಂಚಯ ಜಾಗೃತ ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮಹಿಳಾ ಸಮಾವೇಶದ ಜಿಲ್ಲಾ ಸಂಯೋಜಕಿ ಶ್ರೀದೇವಿ ದೇಶಪಾಂಡೆ ತಿಳಿಸಿದರು.

ಶುಕ್ರವಾರ ನಗರದ ನೆಮ್ಮದಿ ಕುಟೀರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಭಾರತೀಯ ಚಿಂತನೆಯಲ್ಲಿ ಮಹಿಳೆಯನ್ನು ಶಕ್ತಿಯ ಅಧಿದೇವತೆ ಎಂದು ನಾವು ಕರೆದಿದ್ದೇವೆ. ಅನಾದಿ ಕಾಲದಿಂದಲೂ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರ ಮತ್ತು ಜೀವನ ಪದ್ಧತಿಗಳನ್ನು ರೂಢಿಸಿಕೊಳ್ಳಲು ಮಹಿಳೆಯರೇ ಪ್ರಮುಖ ಪಾತ್ರ ವಹಿಸಿದ್ದರು. ತನ್ನ ಕುಟುಂಬ, ಪರಿವಾರಗಳಲ್ಲಿ ಉತ್ತಮ ಸಂಸ್ಕಾರ ಸಿಗಬೇಕು ಮತ್ತು ಪರಿವಾರದ ಎಲ್ಲ ಸದಸ್ಯರೂ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ನಮ್ಮೆಲ್ಲರ ತಾಯಂದಿರು ನೇತೃತ್ವವಹಿಸಿ, ಯಶಸ್ವಿಯಾಗಿದ್ದಾರೆ. ಸ್ವಾತಂತ್ರ್ಯ ಹೋರಾಟ, ಸಮಾಜ ಸುಧಾರಣೆಗಳಲ್ಲೂ ನಮ್ಮ ಮಹಿಳೆಯರು ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ ಎಂದು ನೆನೆದರು.

ಇಂತಹ ನಮ್ಮ ಭಾರತೀಯ ಮಹಿಳೆಯರ ಶಕ್ತಿಯನ್ನು ನಾವು ಇತ್ತೀಚಿನ ಅನೇಕ ವರ್ಷಗಳಲ್ಲಿ ಕಡೆಗಣಿಸುತ್ತ ಬಂದಿರುವುದು ವಿಷಾದನೀಯ. ಅವಳನ್ನು ಅಬಲೆ ಎಂದು ಕರೆದಿದ್ದಷ್ಟೇ ಅಲ್ಲ. ಅವಳು ಸಶಕ್ತಳಾಗಬೇಕಾದರೆ ಹೊರಗಿನ ಸಹಾಯದ ಅವಶ್ಯಕತೆ ಇದೆ ಎಂದು ಬಿಂಬಿಸುವ ಕೆಲಸ ನಮ್ಮ ಸಮಾಜದಲ್ಲಿ ನಡೆಯುತ್ತಿದೆ. ಆದರೆ ಇದು ಸರಿಯಲ್ಲ. ಎಲ್ಲ ಸಂದರ್ಭಗಳಲ್ಲೂ, ತಮ್ಮ ಕರ್ತವ್ಯ-ಆದರ್ಶ-ನೀತಿ-ನಿಯಮಗಳಿಂದ ಸಮಾಜಕ್ಕೆ ದಾರಿದೀಪವಾಗಿ ಬೆಳಗಿದ ಸ್ತ್ರೀ ಒಂದು ದೊಡ ಶಕ್ತಿ ಮತ್ತು ಚೈತನ್ಯದ ಬುಗ್ಗೆ ಎಂದರು.

ಮರೆತು ಹೋಗುತ್ತಿರುವ ಈ ಮಹಾಶಕ್ತಿಯ ದರ್ಶನವೇ ಶಕ್ತಿ ಸಂಚಯ ಎನ್ನುವ ಜಾಗೃತ ಮಹಿಳೆಯರ ಸಮಾವೇಶ. ದೇಶಾದ್ಯಂತ ಇಂತಹ 400 ಕ್ಕೂ ಅಧಿಕ ಮಹಿಳಾ ಸಮಾವೇಶಗಳು ನಡೆಯಲಿದ್ದು, ಈಗಾಗಲೇ ಸುಮಾರು 120 ಕ್ಕೂ ಹೆಚ್ಚು ಸಮಾವೇಶಗಳು ಸಂಪನ್ನಗೊಂಡಿವೆ. ಇವುಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

300x250 AD

ಈ ಸಮಾವೇಶದಲ್ಲಿ ಶಿರಸಿ, ಸಿದ್ದಾಪುರ, ಹಳಿಯಾಳ ಮತ್ತು ಮುಂಡಗೋಡ ಭಾಗದ ಘಟ್ಟದ ಮೇಲಿನ ತಾಲೂಕುಗಳ ಸುಮಾರು 800 ರಿಂದ 1 ಸಾವಿರ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. 3 ಅವಧಿಗಳಲ್ಲಿ ಈ ಸಮಾವೇಶ ನಡೆಯಲಿದ್ದು, ಮೊದಲನೇ ಅವಧಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಭಾರತೀಯ ಚಿಂತನೆಯಲ್ಲಿ ಮಹಿಳೆ ಎನ್ನುವ ವಿಷಯದಲ್ಲಿ ಉಪನ್ಯಾಸ ನಡೆಯಲಿದೆ. ಉದ್ಘಾಟಕರಾಗಿ ಕೆ.ಡಿ.ಸಿ.ಸಿ. ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಸುಮಾ ನಾಯಕ ಆಗಮಿಸಲಿದ್ದು, ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷ್ಮಿ ಬಿ.ಜಿ ಉಪನ್ಯಾಸ ನಡೆಸಿಕೊಡಲಿದ್ದಾರೆ ಎಂದರು.

ಎರಡನೇ ಅವಧಿಯಲ್ಲಿ ಸ್ಥಾನೀಯ ಸಮಸ್ಯೆಗಳು-ಪಶ್ನೆ ಪರಿಹಾರ ಎನ್ನುವ ವಿಷಯದಲ್ಲಿ ಗುಂಪು ಚರ್ಚೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಭಾರತೀಯ ವಿಕಾಸದಲ್ಲಿ ಮಹಿಳೆಯ ಪಾತ್ರ ಎನ್ನುವ ವಿಷಯದಲ್ಲಿ ಉಪನ್ಯಾಸ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ರಮಾ ಪಟವರ್ಧನ ಆಗಮಿಸಲಿದ್ದು, ಧಾರವಾಡದ ಕರ್ನಾಟಕ ಕಾಲೇಜು ಉಪನ್ಯಾಸಕಿ ಡಾ. ಗೀತಾ ಪಾಸ್ತೇ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದ ಅವರು, ಹೆಚ್ಚಿನ ಮಾಹಿತಿಗಾಗಿ Tel:+918197870974 ಸಂಪರ್ಕಿಸಲು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಸಮಾವೇಶದ ಸಹ ಸಂಯೋಜಕಿ ನಂದಿನಿ ರಾಯಪುರ, ಪ್ರಮುಖರಾದ ಸುಗಂಧಿ ಗುರುಪ್ರಸಾದ, ಶಾರದಾ ಕಳಸಣ್ಣನವರ, ಶಿಲ್ಪಾ ನಾಗರಕಟ್ಟೆ, ಅಕ್ಷಯ ಸೇವಾ ಪ್ರತಿಷ್ಠಾನದ ಮೋಹನ ಸ್ವಾದಿ, ಸುಭಾಷ ಮಂಡೂರು ಇದ್ದರು.

Share This
300x250 AD
300x250 AD
300x250 AD
Back to top