ಶಿರಸಿ: ಲೋಕ ಕಲ್ಯಾಣಕ್ಕಾಗಿ, ಸಹಸ್ರ ಹೃದಯಗಳಿಂದ, ಸಹಸ್ರ ಧ್ಯಾನೋಪಾಸನೆ ಎಂಬ ವಾಕ್ಯದಡಿಯಲ್ಲಿ ಡಿ. 2 ರಿಂದ 4 ರವರೆಗೆ ಮೂರು ದಿನಗಳ ಕಾಲ ಸಾಯಂಕಾಲ 3-30 ರಿಂದ 5 ಗಂಟೆಯವರೆಗೆ ನಗರದ ನೆಮ್ಮದಿ ಕುಟೀರದಲ್ಲಿ ಉಚಿತವಾಗಿ ಹಾರ್ಟ್‌ಫುಲ್‌ನೆಸ್ ಧ್ಯಾನ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಡಾ. ಆರ್.ಎಸ್.ಹೆಗಡೆ ತಿಳಿಸಿದರು.
ಅವರು ಬುಧವಾರ ನಗರದ ನೆಮ್ಮದಿ ಕುಟೀರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಹಾರ್ಟ್‌ಫುಲ್‌ನೆಸ್ ಧ್ಯಾನವು, ಯೌಗಿಕ ಪ್ರಾಣಾಹುತಿ ಶಕ್ತಿಯ ಸಹಾಯದಿಂದ ಮಾಡುವ ಹೃದಯಾಧಾರಿತ ಸರಳ ಧ್ಯಾನ ಪದ್ಧತಿಯಾಗಿದೆ. ಇದರಿಂದ ಹಗುರತೆ ಮತ್ತು ಆನಂದದ ನಮ್ಮ ನಿಜವಾದ ಸ್ವರೂಪವನ್ನು ಹೃದಯದಲ್ಲಿ ಅನುಭವಿಸಬಹುದು. ನಾವು ನಮ್ಮ ಹೃದಯದೊಂದಿಗೆ ಸ್ಪಂದಿಸಿದಾಗ ಒಳಗಿನಿಂದ ಬರುವ ಸ್ಪೂರ್ತಿಯನ್ನು ಪಡೆದು, ನಮ್ಮ ಜೀವನದ ಮೇಲೆ ನಿಯಂತ್ರಣ ತರಬಹುದು. ಹಾರ್ಟ್‌ಫುಲ್‌ನೆಸ್ ಧ್ಯಾನವು ಹೃದಯ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ತಂದು ಎಲ್ಲ ಒತ್ತಡವನ್ನು ತೆಗೆದುಹಾಕಿ, ನಮ್ಮ ಜೀವನದಲ್ಲಿ ಸಮತೋಲನವನ್ನು ತರುತ್ತದೆ ಎಂದರು.
ಈ ಸರಳ, ಸುಲಭ ಮತ್ತು ಪರಿಣಾಮಕಾರಿಯಾದ ಧ್ಯಾನವನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು, ಮೂರು ದಿನಗಳ ತರಬೇತಿಯ ಅವಶ್ಯಕತೆ ಇರುತ್ತದೆ. ಆ ನಿಟ್ಟಿನಲ್ಲಿ ನಾವು ನೆಮ್ಮದಿ ಕುಟೀರದಲ್ಲಿ ಮೂರು ದಿನಗಳ ಕಾಲ ಉಚಿತವಾಗಿ ಹಾರ್ಟ್‌ಫುಲ್‌ನೆಸ್ ಧ್ಯಾನವನ್ನು ಆಯೋಜಿಸಿದ್ದು, 1 ಸಾವಿರ ಜನತೆಗೆ ಸಕಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಡಾ.ತ್ರಿವಿಕ್ರಮ ಪಟವರ್ಧನ ಮಾತನಾಡಿ, 15 ವರ್ಷಗಳಿಂದ ಸಂಸ್ಥೆ ವತಿಯಿಂದ ಉಚಿತವಾಗಿ ಧ್ಯಾನ ಕಲಿಸುತ್ತಿದ್ದೇವೆ. ಇಲ್ಲಿಯೂ ಸಹ 3 ದಿನಗಳ ಕಾಲ ತರಬೇತಿ ಹಮ್ಮಿಕೊಳ್ಳಲಾಗಿದೆ. ಇದೊಂದು ಪರಿಣಾಮಕಾರಿ ಕಾರ್ಯಕ್ರಮವಾಗಿದ್ದು, ಈ ಧ್ಯಾನದಿಂದ ಆಧ್ಯಾತ್ಮಿಕ ಬದಲಾವಣೆ ಹಾಗೂ ಸಾಮರಸ್ಯ ಗಳಿಸಲು ಸಾಧ್ಯವಾಗುತ್ತದೆ ಎಂದರು.
ಶಶಿರೇಖಾ ಹೆಗಡೆ ಮಾತನಾಡಿ, ಇದು ಮೂರು ದಿನಗಳ ತರಬೇತಿಯಾಗಿದ್ದು, ಮೂರೂ ದಿನಗಳ ಕಾಲ ತರಬೇತಿ ಪಡೆದರೆ ಮಾತ್ರ ಒಂದು ಕೋರ್ಸ್ ಸಂಪೂರ್ಣವಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀಪಾದ ಹೆಗಡೆ, ಪೂರ್ಣಿಮಾ ಹೆಗಡೆ, ಆಶಾ ತೋಡೂರಕರ್ ಇದ್ದರು.