ಕುಮಟಾ: ಶ್ರೀ ಮಹಾವಿಷ್ಣು ಕಲಾ ಬಳಗ ಕೋಣಾರೆ ಸಹಯೋಗದಲ್ಲಿ ಹೊಸಾಡದ ಅಮೃತಧಾರಾ ಗೋಶಾಲೆ ಇದರ ಸಹಾಯಾರ್ಥ ನಡೆದ ಗಾನವೈಭವ ಹಾಗೂ ಭಸ್ಮಾಸುರ ಮೋಹಿನಿ ಯಕ್ಷಗಾನ ಜನಮಸೂರೆಗೊಂಡಿತು.
ತೋಟಿಮನೆಯವರ ಭಸ್ಮಾಸುರ ಹಾಗೂ ಅಶ್ವಿನಿ ಕೊಂಡದಕುಳಿಯ ಮೋಹಿನಿ ಪಾತ್ರಗಳು ಜನ ಮೆಚ್ಚುಗೆ ಪಡೆದವು. ಕಾರ್ಯಕ್ರಮದ ಪ್ರಾರಂಭದಲ್ಲಿ ನಡೆದ ಗಾನ ವೈಭವ ಕೂಡ ಯಕ್ಷಗಾನ ಕಲಾರಸಿಕರ ಪ್ರಶಂಸೆಗೆ ಒಳಗಾದವು. ನಡುವೆ ನಡೆದಂತಹ ಸಭಾ ಕಾರ್ಯಕ್ರಮದಲ್ಲಿ, ಆಗಮಿಸಿದ ಸರ್ವರನ್ನು ಗೋಶಾಲೆಯ ಕಾರ್ಯದರ್ಶಿ ಅರುಣ ಹೆಗಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಗೋ ಶಾಲೆಯ ಅಧ್ಯಕ್ಷ ಮುರಳಿಧರ ಪ್ರಭು ಪ್ರಾಸ್ತಾವಿಕ ಮಾತನಾಡಿ,
ಗೋಶಾಲೆಯ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತ, ಗೋವಿನ ಪಾಲಿಗೂ ಬರುವ ಬರಗಾಲದ ದಿನಗಳು ಇನ್ನೂ ಭೀಕರವಾಗುವ ಲಕ್ಷಣಗಳು ಕಂಡು ಬರುತ್ತಿದೆ. ನಾವೆಲ್ಲರೂ ಗೋಸಂತತಿಯನ್ನು ಉಳಿಸಲು ಸನ್ನದ್ಧರಾಗಬೇಕಾಗಿದೆ. ನಾವಿರುವದು ಗೋವಿಂದ. ಗೋವಿಲ್ಲದಿದ್ದರೆ ಗೋವಿಂದ ಎಂದು ಮಾರ್ಮಿಕವಾಗಿ ಮಾತನಾಡಿದರು.
ಯಕ್ಷಗಾನ ಸಮಿತಿಯ ಕೋಶಾಧಿಕಾರಿ ಜಿ.ಎಸ್.ಹೆಗಡೆ, ಗೋವು ನಮ್ಮ ಸಂಸ್ಕೃತಿ. ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರಯುತ್ನಪಡೋಣ. ನಿಮ್ಮೆಲ್ಲರ ಸಹಕಾರ ತೀರ ಅತ್ಯಗತ್ಯ ಎಂದರು.
ವಿದ್ಯಾನಿಕೇತನ ಮೂರೂರಿನ ಆಡಳಿತ ಮಂಡಳಿಯ ಅಧ್ಯಕ್ಷ ಆರ್. ಜಿ. ಭಟ್ಟ, ಗೋವು ಮತ್ತು ಯಕ್ಷಗಾನ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ನಾವೆಲ್ಲರೂ ಕೂಡಿ ಮಾಡೋಣ ಎಂದರು. ವೇದಿಕೆಯ ಮೇಲೆ ಮಹಾವಿಷ್ಣು ಕಲಾ ಬಳಗದ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಗೋಶಾಲೆಯ ಉಪಾಧ್ಯಕ್ಷ ಆರ್.ಜಿ.ಭಟ್ಟ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಉಗ್ರು, ಸದಸ್ಯರಾದ ಸದಾನಂದ ಮಡಿವಾಳ, ಆರ್.ಎನ್.ಹೆಗಡೆ, ರವಿ ಹೆಗಡೆ ದೀವಳ್ಳಿ ಮುಂತಾದವರು ಉಪಸ್ಥಿತರಿದ್ದರು.