ಸಿದ್ದಾಪುರ: ತಾಲೂಕಿನ ಬಾಳೇಸರದ ಕೃಷಿ ವಿಚಾರ ವಿನಿಮಯ ಕೇಂದ್ರ ಟ್ರಸ್ಟ್ನ ರಜತ ಮಹೋತ್ಸವ, ನೂತನ ಕಾರ್ಯಾಲಯ, ಸಭಾಭವನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ರಜತ ಮಹೋತ್ಸವ ಉದ್ಘಾಟಿಸಿದ ನಬಾರ್ಡ್ ಸಿಜಿಎಂ ಟಿ.ರಮೇಶ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ರೀತಿಯ ಸಂಘಟನೆಯನ್ನು ಮಾಡಿ 25 ವರ್ಷಗಳ ಕಾಲ ಕ್ರಿಯಾಶೀಲವಾಗಿ, ಸಕ್ರಿಯವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಈ ಸಂಸ್ಥೆಯ ಬಗ್ಗೆ ಸಂತೋಷವೆನ್ನಿಸುತ್ತದೆ. ಕಳೆದ 20 ವರ್ಷಗಳಿಂದ ಈ ಸಂಸ್ಥೆಯ ಪರಿಚಯವಿದ್ದು, ತನ್ನ ಕಾರ್ಯಸಾಧನೆಗಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಪ್ರಶಸ್ತಿಯನ್ನು ಈ ಸಂಸ್ಥೆ ಪಡೆದಿರುವದು ಶಾಘ್ಲನೀಯ ಎಂದರು.
ಸಭಾಭವನ ಉದ್ಘಾಟಿಸಿದ ನಾಬ್‌ಫೀನ್ಸ್ ಸಂಸ್ಥೆ ಎಂಡಿ ಡಾ.ದಿವಾಕರ ಹೆಗಡೆ, ನಬಾರ್ಡ್ ಗುರುತಿಸಿದ ನಮ್ಮ ಸಂಸ್ಥೆಗೆ ಈ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಭೇಟಿ ನೀಡಿ ಅಂದಿನಿ0ದ ನಿರಂತರವಾಗಿ ನಮ್ಮ ಕಚೇರಿಯೊಡನೆ ಸಂಪರ್ಕ ಇರಿಸಿಕೊಂಡು ವ್ಯವಹರಿಸುತ್ತ ಬಂದಿರುವುದು ಪ್ರಶಂಸನೀಯ ಎಂದರು. ಕೆನರಾ ಬ್ಯಾಕ್ ಎಜಿಎಮ್ ನಂದಕಿಶೋರ ಹಾಗೂ ನಿವೃತ್ತ ಡಿಜಿಎಮ್ ಎಂ.ಎಸ್.ಅರುಣಕುಮಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಮಾಜಿ ಮಂಡಲ ಪ್ರಧಾನ ಶಂಕರಭಟ್ಟ ಮಸ್ಗುತ್ತಿ ವಹಿಸಿದ್ದರು. ಈ ಸಂದರ್ಭದಲ್ಲಿ ಉತ್ತಮ ಕೃಷಿಕ ವೆಂಕಟರಮಣ ಐ.ಜೋಶಿ ಕಂಚ್ಗುಳಿ, ಸಂಸ್ಥೆಯ ಹಿಂದಿನ ಪದಾಧಿಕಾರಿಗಳನ್ನು, ಸಾಧಕ ಸದಸ್ಯರನ್ನು ಅಭಿನಂದಿಸಲಾಯಿತು. ರಶ್ಮಿ ಹೆಗಡೆ ಗಣಪತಿ ಸ್ತುತಿಯನ್ನು, ರೈತಗೀತೆಯನ್ನು ಎಂ.ಆರ್.ಹೆಗಡೆ ಹೊಸ್ಮನೆ, ರಜತಗೀತೆಯನ್ನು ರಾಮಚಂದ್ರ ಹೆಗಡೆ ತಂಗರ‍್ಮನೆ ಹಾಡಿದರು. ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಬಾಳೇಸರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಹೆಗಡೆ ಶಮೇಮನೆ ವರದಿ ವಾಚಿಸಿದರು. ಟ್ರಸ್ಟಿ ಜಿ.ಪಿ.ಹೆಗಡೆ ಕಲ್ಮನೆ ವಂದಿಸಿದರು.