ಕುಮಟಾ: ಜಿಲ್ಲೆಯಲ್ಲಿ ಗೋವುಗಳ ಕಳ್ಳ ಸಾಗಾಣಿಕೆ ಪ್ರಕರಣ ಜಾಸ್ತಿಯಾಗಿದ್ದು, ಇದನ್ನು ತಡೆಯುವಂತೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಪೊಲೀಸ್ ಇನ್ಸ್ಸ್ಪೆಕ್ಟರ್ ಮೂಲಕ ಎಸ್ಪಿಗೆ ಮನವಿ ರವಾನಿಸಿದರು.
ಇನ್ಸ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕರನ್ನು ಭೇಟಿ ಮಾಡಿದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋವುಗಳ ಕಳ್ಳ ಸಾಗಾಣಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ತಡ ರಾತ್ರಿಯಲ್ಲಿ ಕಾರ್ಯಾಚರಣೆಗೆ ಇಳಿಯುವ ಗೋ ಕಳ್ಳರು ಕಾರಿನ ಡಿಕ್ಕಿಯಲ್ಲಿ ಗೋವುಗಳನ್ನು ಅಪಹರಿಸಿ, ಕಸಾಯಿಖಾನೆಗೆ ಸಾಗಿಸುತ್ತಿರುವುದು ಕಂಡುಬ0ದಿದೆ. ಕೆಲವು ಬಾರಿ ಸಿಸಿ ಕ್ಯಾಮರಾದಲ್ಲೂ ಗೋ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಪೊಲೀಸರು ಕೆಲ ಕಳ್ಳರನ್ನು ಬಂಧಿಸಿದ್ದು, ಇದೆ. ಆದರೆ ಗ್ರಾಮೀಣ ಭಾಗದಲ್ಲೂ ಗೋವುಗಳ ಕಳ್ಳತನ ಜಾಸ್ತಿಯಾಗಿದೆ. ಗೋವುಗಳ ಮಾಲೀಕರು ತನ್ನ ದನಕರುಗಳು ಕಾಣೆಯಾದರೆ ಪೊಲೀಸ್ ದೂರು ದಾಖಲಿಸುವುದಿಲ್ಲ. ಹಾಗಾಗಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದರೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಗೋ ಕಳ್ಳರನ್ನು ದಸ್ತಗಿರಿ ಮಾಡುವ ಕಾರ್ಯವಾಗಬೇಕು. ಈ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ಕಳ್ಳತನವನ್ನು ತಡೆಯುವಂತೆ ಕ್ರಮ ವಹಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಗೀಸ್, ಪದಾಧಿಕಾರಿಗಳಾದ ಸುಧಾಕರ ನಾಯ್ಕ, ಮುಜೀಬ್ ಸಾಬ್, ಪ್ರಕಾಶ ಪಟಗಾರ, ಪಾಂಡು ನಾಯ್ಕ, ಈಶ್ವರ ನಾಯ್ಕ ಇತರರು ಇದ್ದರು.