ಕಾರವಾರ: ತಾಲೂಕಿನ ಶ್ರೀಕ್ಷೇತ್ರ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಕಾರ್ತಿಕ ಮಹೋತ್ಸವವು ನ.27 ರಂದು ಗೌರಿ ಹುಣ್ಣಿಮೆಯ ದಿನ ನೆರವೇರಲಿದೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಪಲ್ಲಕ್ಕಿ ಮೆರವಣಿಗೆಯು ನ.27 ರಂದು ಬೆಳಿಗ್ಗೆ 10 ಗಂಟೆಗೆ ದೇವಾಲಯದಿಂದ ಹೊರಟು ವನಕ್ಕೆ ತಲುಪಲಿದೆ. ಬಳಿಕ ಅಲ್ಲಿ ಧಾತ್ರಿ ಹೋಮ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.
ಮಧ್ಯಾಹ್ನ 1.30ಕ್ಕೆ ನಡೆಯುವ ವನಭೋಜನದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಸಂಜೆ 6 ಗಂಟೆಗೆ ಶ್ರೀ ದೇವರ ಪಲ್ಲಕ್ಕಿಯು ವನದಿಂದ ಹೊರಟು ಮಖೇರಿ ಕ್ರಾಸ್ ಬಳಿ ಪಲ್ಲಕ್ಕಿಯಿಂದ ಇಳಿಸಿ ಲಾಲಕಿಯಲ್ಲಿ ಕುಳ್ಳರಿಸಲಾಗುತ್ತದೆ. ಆ ಬಳಿಕ ಲಾಲಕಿಯಲ್ಲಿ ಮೆರವಣಿಗೆ ಹೊರಟ ಶ್ರೀ ದೇವರ ಉತ್ಸವ ಮೂರ್ತಿಗೆ ಭಕ್ತಾದಿಗಳು ಸೇವೆ ಸಲ್ಲಿಸಲಿದ್ದಾರೆ. ಮೆರವಣಿಗೆಯು ಶ್ರೀ ಶೆಜ್ಜೇಶ್ವರ ದೇವಸ್ಥಾನ
ತಲುಪಿದ ಬಳಿಕ ದೇವಸ್ಥಾನದ ಆವರಣದಲ್ಲಿ ಆಕರ್ಷಕ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ದೀಪೋತ್ಸವದ ನಂತರ ಕೆರೆಯಲ್ಲಿ ಶ್ರೀ ದೇವರ ತೆಪ್ಪೋತ್ಸವ ನಡೆಯಲಿದ್ದು, ನಂತರ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿಸುವ ಮೂಲಕ ಕಾರ್ತಿಕೋತ್ಸವ ಸಂಪನ್ನಗೊಳ್ಳಲಿದೆ ಎಂದು ಶ್ರೀ ಶೆಜ್ಜೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ತಿಳಿಸಿದೆ. ಈ ಎಲ್ಲ ಧಾರ್ಮಿಕ ಕೈಂಕರ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿಯ ಅಧ್ಯಕ್ಷರು, ಎಲ್ಲ ಸದಸ್ಯರು, ಅರ್ಚಕರು, ವೃತ್ತಿವಾನರು, ದೇವಳಿಯರು ಹಾಗೂ ಊರ ನಾಗರಿಕರು ಕೋರಿದ್ದಾರೆ.