ದಾಂಡೇಲಿ: ಚೆನ್ನಬೈರಾದೇವಿಯ ಐತಿಹ್ಯದ ನೆಲ, ಹೊನ್ನಿನೂರು, ಹೊನ್ನಾವರ ತಾಲೂಕಿನಲ್ಲಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.
ಇದು ನಮ್ಮ ಅವಧಿಯ ಎರಡನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದ್ದು, ಕಳೆದ ವರ್ಷ ಗಡಿಪ್ರದೇಶವಾದ ಜೋಯಿಡಾ ತಾಲೂಕಿನ ಉಳಿವಿಯಲ್ಲಿ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಜೊತೆಗೆ ಜಿಲ್ಲೆಯಾದಂತ 11 ತಾಲೂಕುಗಳ ಸಾಹಿತ್ಯ ಸಮ್ಮೇಳನ ಕೂಡ ನಡೆದಿತ್ತು. ಈ ವರ್ಷ 23ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಹೊನ್ನಾವರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಹೊನ್ನಾವರ ತಾಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯದೆ ಸುಮಾರು 25 ವರ್ಷಗಳೇ ಕಳೆದು ಹೋಗಿದೆ. ಹಾಗಾಗಿ ಈ ತಾಲೂಕಿಗೆ ಈ ಬಾರಿಯ ಸಮ್ಮೇಳನದ ಆದ್ಯತೆಯನ್ನು ನೀಡಲಾಗಿದೆ. ಹೊನ್ನಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದವರು ಕೂಡ ಸಮ್ಮೇಳನ ನಡೆಸಲು ಮುಂದೆ ಬಂದಿದ್ದು, ಇದಕ್ಕೆ ಜಿಲ್ಲಾ ಸಮಿತಿ ಸರ್ವಾನುಮತದ ಸಮ್ಮತಿಯನ್ನು ನೀಡಿದೆ. ಹಲವು ವೈಶಿಷ್ಟ್ಯತೆಗಳೊಂದಿಗೆ ಡಿಸೆಂಬರ್ ಕೊನೆಯ ವಾರದಲ್ಲಿ 23ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಂಘಟಿಸಲಾಗುವುದು. ಸಧ್ಯದಲ್ಲಿಯೇ ಹೊನ್ನಾವರದಲ್ಲಿ ಸ್ಥಳೀಯ ತಾಲೂಕು ಆಡಳಿತ ಹಾಗೂ ಕಸಾಪ ಆಜೀವ ಸದಸ್ಯರು, ಸಾಹಿತಿಗಳು ಮತ್ತು ಸಂಘಟನೆಯ ಪ್ರಮುಖರ ಜೊತೆ ಸಭೆ ನಡೆಸಿ ದಿನಾಂಕ ನಿಗದಿಪಡಿಸಲಾಗುವುದು ಎಂದಿದ್ದಾರೆ.
ರಾಜ್ಯದೆಲ್ಲಡೆ ಬರಗಾಲ ಬಿದ್ದಿರುವ ಹಿನ್ನೆಲೆ ಹಾಗೂ ಅನುದಾನದ ಸಮಸ್ಯೆಯ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಅದ್ದೂರಿಯಾಗಿಸದೇ ಸಾಧ್ಯವಾದಷ್ಟು ಸರಳವಾಗಿ ನಡೆಸಲಾಗುವುದು. ಗೋಷ್ಠಿ ಹಾಗೂ ಉಪನ್ಯಾಸಗಳಿಗೆ ಅಧ್ಯತೆ ನೀಡಲಾಗುವುದು. ಕಳೆದ ವರ್ಷ ನಡೆದ 11 ತಾಲೂಕು ಸಮ್ಮೇಳನಗಳಲ್ಲಿ 7 ತಾಲೂಕು ಸಮ್ಮೇಳನಗಳ ಅನುದಾನ ಈವರೆಗೂ ಬಂದಿಲ್ಲ. ಈ ವರ್ಷದ ಯಾವ ತಾಲೂಕು ಸಮ್ಮೇಳನ ಹಾಗೂ ಜಿಲ್ಲಾ ಸಮ್ಮೇಳನಕ್ಕೆ ಅನುದಾನ ನೀಡುವ ಬಗ್ಗೆ ಕೂಡ ಇವರೆಗೂ ಪೂರ್ವಾನುಮತಿ ಸಿಕ್ಕಿಲ್ಲ. ಆದರೂ ಕೂಡ ನಾವು ನಮ್ಮ ಚುನಾವಣೆಯ ಸಂದರ್ಭದಲ್ಲಿ ಹೇಳಿದ ಹಾಗೆ ವರ್ಷಕ್ಕೊಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಮತ್ತು ತಾಲೂಕು ಸಮ್ಮೇಳನವನ್ನ ನಡೆಸಲು ಉದ್ದೇಶಿಸಿದ್ದೇವೆ. ಈ ಸಮ್ಮೇಳನಗಳ ಯಶಸ್ಸಿಗೆ ಜಿಲ್ಲೆಯ ಸಾಹಿತ್ಯಾಸಕ್ತರ ಹಾಗೂ ಸಹೃದಯಿ ದಾನಿಗಳ ತನು- ಮನ- ಧನಗಳ ಸಹಾಯವನ್ನು ಬಯಸುತ್ತೇವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.