ಹೊನ್ನಾವರ : ಅರಣ್ಯ ಭೂಮಿಯಲ್ಲಿ ಬಗರ ಹುಕುಮ್ ಸಾಗುವಳಿ ಮಾಡಿ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಬದುಕನ್ನು ಕಟ್ಟಿಕೊಂಡಿರುವ ಜಿಲ್ಲೆಯ 75000 ಕುಟುಂಬಗಳಿಗೆ ಭೂಮಿಯ ಹಕ್ಕು ಸಿಗುವಂತೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳನ್ನು ಕಾರವಾರದಲ್ಲಿ ಭೇಟಿ ಮಾಡಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗುಬಾಯಿ ಮಾನಕರ್ ಜೊತೆ ಸುದೀರ್ಘ ಚರ್ಚೆ ನಡೆಸಿದ ನಿಯೋಗವು ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರವರು ಬರೆದ ಟಿಪ್ಪಣಿಯನ್ನು ನಿಯೋಗವು ಜಿಲ್ಲಾಧಿಕಾರಿ ಗಂಗುಬಾಯಿ ಮಾನಕರ್ ಅವರಿಗೆ ಹಸ್ತಾಂತರ ಮಾಡಿದ್ದು ಪ್ರತ್ಯೇಕ ಮನವಿಯನ್ನು ಸಹ ಸಲ್ಲಿಸಿತು.
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಅರಣ್ಯ ಹಕ್ಕು ಕ್ಲೇಮುಗಳ ಪುನರ್ ಪರಿಶೀಲನೆಗೆ ಸರ್ಕಾರದಿಂದ ಆದೇಶ ಆಗಿರುವ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಪುನರ್ ಪರಿಶೀಲನಾ ಪ್ರಕ್ರಿಯೆಗಳನ್ನು ಗ್ರಾಮ ಮತ್ತು ಉಪವಿಭಾಗೀಯ ಮಟ್ಟದಲ್ಲಿ ಜಿಲ್ಲೆಯ ಜನರು ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಸೌಲಭ್ಯದಿಂದ ವಂಚಿತರಾಗದಂತೆ ಮತ್ತು ಈ ಕಾಯ್ದೆಯ ಮೂಲ ಉದ್ದೇಶ ಹಾಗೂ ಆಶಯಗಳಿಗೆ ಪೂರಕವಾಗಿ ಮಾನವೀಯ ನೆಲೆಯಲ್ಲಿ ನೈಸರ್ಗಿಕ ನ್ಯಾಯ ನಿಯಮದಂತೆ ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತದಿಂದ ಕ್ರಮಗಳು ಆಗಬೇಕು. ಅಸಮರ್ಪಕ ಜಿಪಿಎಸ್ ನಕ್ಷೆಗಳ ವಿಚಾರದಲ್ಲಿ ಮೇಲ್ಮನವಿಗಳು ದಾಖಲಾಗಿರುವ ಹಾಗೂ ಜಿಪಿಎಸ್ ನಕ್ಷೆ ಆಗುವದು ಬಾಕಿ ಇರುವ ಪ್ರಕರಣಗಳಲ್ಲಿ ಜಂಟಿ ಸ್ಥಳ ತನಿಖೆಯೊಂದಿಗೆ ರೈತರ ವೈವಾಟಿ ಸ್ಥಳವನ್ನು ಗುರುತಿಸಿ ದಾಖಲೀಕರಣ ಗೊಳಿಸಲು ಗ್ರಾಮ ಅರಣ್ಯ ಹಕ್ಕು ಸಮಿತಿಗಳ ಮೂಲಕ ಕ್ರಮಗಳು ಆಗಬೇಕು. ಕೇಂದ್ರ ಬುಡಕಟ್ಟು ಮಂತ್ರಾಲಯದ ವಿವಿಧ ಸುತ್ತೋಲೆ ಮತ್ತು 2012ರ ತಿದ್ದುಪಡಿ ನಿಯಮ ಹಾಗೂ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಸದುದ್ದೇಶವನ್ನು ಉಲ್ಲೇಖಿಸಿರುವ ನಿಯೋಗವು ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯು ಅರಣ್ಯವಾಸಿಗಳ ಪರವಾಗಿ ಇದೆ.ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಿಂದ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡವರ ಹಿತರಕ್ಷಣೆ ಮಾಡಲು ಸಾಧ್ಯವಿದೆ ಎಂದು ನಿಯೋಗವು ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ.
ಜಿಲ್ಲೆಯ ಒಟ್ಟು ಜನಸಂಖ್ಯೆಯ ಮೂರರಲ್ಲಿ ಒಂದು ಭಾಗದಷ್ಟು ಪ್ರಮಾಣದಲ್ಲಿ ಜನರು ವಸತಿ ಮತ್ತು ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯ ಜನರ ಹಿತರಕ್ಷಣೆಗೆ ಪೂರಕವಾಗಿ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡುವಂತಾಗಬೇಕು, ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದ ನಡೆಯುತ್ತಿರುವ ಅನಗತ್ಯ ಕಿರುಕುಳಗಳಿಗೆ ತಡೆ ಹಾಕಬೇಕು ವಿನಾಕಾರಣ ಪ್ರಕರಣಗಳನ್ನು ದಾಖಲಿಸದಂತೆ ಕಡಿವಾಣ ಹಾಕಬೇಕು ಎಂದು ನಿಯೋಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ನಿಯೋಗದಲ್ಲಿ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಗೌರವಾಧ್ಯಕ್ಷ ಮಂಜುನಾಥ್ ಎನ್. ನಾಯ್ಕ ಬೋಳ್ಕಾರ, ಸಂಚಾಲಕ ಯೋಗೇಶ ರಾಯ್ಕರ, ಭೂಮಿ ಹಕ್ಕು ವೇದಿಕೆಯ ಶ್ರೀಧರ ಶೆಟ್ಟಿ ಚಿಕ್ಕನಕೋಡ ಇನ್ನು ಮುಂತಾದ ಪ್ರಮುಖರು ಉಪಸ್ಥಿತರಿದ್ದರು.