ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ತು, ಉ.ಕ.ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ತಾಲೂಕು ಘಟಕದ ವತಿಯಿಂದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ತಿಂಗಳಿಡೀ ಸಾಹಿತ್ಯ ಪಯಣ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಗೊರಟೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನಾಡು ನುಡಿಯ ಕುರಿತಾದ ಗೀತಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಉದ್ಘಾಟಿಸಿ ನವೆಂಬರ್ ಮಾಸ ನಮ್ಮ ನಾಡಿಗೆ ರಾಜ್ಯೋತ್ಸವದ ಸಂಭ್ರಮವನ್ನು ತಂದುಕೊಡುತ್ತದೆ. ರಾಜ್ಯೋತ್ಸವವು ನಮ್ಮ ನಾಡು ನುಡಿ ಮತ್ತು ನಾಡನ್ನು ಕಟ್ಟಿದವರ ಸ್ಮರಣೆಯನ್ನು ಮಾಡುವ ಸಂದರ್ಭವಾಗಿದೆ. ಒಂದು ಶತಮಾನದಷ್ಟು ಸುದೀರ್ಘ ಕಾಲ ನಡೆದ ಏಕೀಕರಣದ ಇತಿಹಾಸ ಅರಿತು ಈ ನಾಡನ್ನು ಭವಿಷ್ಯದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಲು ವರ್ತಮಾನದಲ್ಲಿ
ನಮ್ಮ ವೈಯಕ್ತಿಕ ನೆಲೆಯ ಕೊಡುಗೆ ನೀಡಲು ಸಂಕಲ್ಪಿಸುವ ದಿನವೂ ಆಗಿದೆ. ಹಾಗಾದಾಗ ರಾಜ್ಯೋತ್ಸವ ಎಂಬುದು ನಿತ್ಯೋತ್ಸವವಾಗುತ್ತದೆ ಎಂದು ನುಡಿದು ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಹಾಗೆಯೇ ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದ ಶಾಲಾ ಮುಖ್ಯೋಪಾದ್ಯಾಯರಾದಿಯಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಶಾಲಾ ಶಿಕ್ಷಕ ಮತ್ತು ವಿದ್ಯಾರ್ಥಿ ವೃಂದದವರ ಕೋರಿಕೆಯ ಮೇರೆಗೆ ಕನ್ನಡ ನಾಡು ನುಡಿ ಅಭಿಮಾನದ ಗೀತೆಯನ್ನೂ ಹಾಡಿ ಎಲ್ಲರ ಮನ ತಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯಾಧ್ಯಾಪಕ ರಾಘವೇಂದ್ರ ನಾಯ್ಕ ಮಾತನಾಡಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಯುವಕವಿಗಳಿಗೆ ವೇದಿಕೆಯೊದಗಿಸುವುದರ ಜೊತೆಗೆ ಜನಸಾಮಾನ್ಯರನ್ನೂ ತಲುಪುವ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮುದಾಯದೆಡೆಗೆ ಸಾಹಿತ್ಯ ಪರಿಷತ್ತನ್ನು ಕೊಂಡೊಯ್ಯುವ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಅಭಿನಂದನಾರ್ಹ ಎಂದರಲ್ಲದೇ ಸಾಹಿತ್ಯ ಪರಿಷತ್ತು ಎಲ್ಲರ ಗಮನ ಸೆಳೆಯುವಂತಹ ಕಾರ್ಯ ಮಾಡುತ್ತಿರುವುದು ಖುಷಿಯ ಸಂಗತಿ ಎಂದು ನುಡಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ ಮಾತನಾಡಿ ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯನ್ನು ಏರಲು ಎಲ್ಲ ಅವಕಾಶಗಳಿದ್ದು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಶಾಲೆಗೆ ಕುಟುಂಬಕ್ಕೆ ಹಾಗೆಯೇ ನಾಡಿಗೆ ಕೀರ್ತಿ ತರುವಂತಾಗಬೇಕೆಂದು ಶುಭಹಾರೈಸಿದರು.
ಗೀತಗಾಯನ ಸ್ಪರ್ಧೆಯಲ್ಲಿ ಶೈಲಾ ಮಂಜುನಾಥ ಮೊಗೇರ ಪ್ರಥಮ, ಗಾಯನ ಲಕ್ಷ್ಮಣ ಮೊಗೇರ ದ್ವಿತೀಯ, ಹಾಗೂ ಸಂಜನಾ ಮಂಜುನಾಥ ನಾಯ್ಕ ತೃತೀಯ ಬಹುಮಾನ ಪಡೆದರು. ಭಾಗವಹಿಸಿದ ವಿದ್ಯಾರ್ಥಿಗಳೆಲ್ಲರಿಗೂ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗವೇಣಿ ನಾಯ್ಕ, ಭಾಗಿರಥಿ ಹೆಗಡೆ ಸಂತೋಷ ಕುಮಾರ, ಆಶಾರಾಣಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಭಾಷಾ ಶಿಕ್ಷಕಿ ಪದ್ಮಾವತಿ ನಾಯ್ಕ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ದುರ್ಗಾದಾಸ ಹರಿಕಂತ್ರ ವಂದಿಸಿದರು.